ಮಂಗಳೂರು; ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಕುರಿತಂತೆ ಫೋನ್ ಮೂಲಕ ಈಶ್ವರಪ್ಪ ಅವರ ಜೊತೆಗೆ ಮಾತಾಡುವೆ. ಮತ್ತೆ ಅವರನ್ನು ಕರೆಸಿ ಚರ್ಚೆ ನಡೆಸುತ್ತೇನೆ. ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ಆಗಿದೆ, ಅವರನ್ನು ಕರೆಸಿ ಮಾತಾಡುವೆ; ಸಿಎಂ ಬೊಮ್ಮಾಯಿ - ಸಚಿವ ಈಶ್ವರಪ್ಪ ರಾಜೀನಾಮೆ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿರುದ್ಧ ಎಫ್ ಐಆರ್ ಆಗಿದೆ ಎಂಬುದನ್ನು ಸಿಎಂ ಬೊಮ್ಮಾಯಿ ಖಚಿತಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆ ಸಂಬಂಧಿಸಿದಂತೆ ಈಶ್ವರಪ್ಪ ಅವರ ಮೇಲೆ ಎಫ್ಐಆರ್ ಆಗಿದೆ. ಎಲ್ಲಾ ವಿವರಗಳನ್ನು ಪಡೆದುಕೊಂಡಿದ್ದೇನೆ. ರಾಜೀನಾಮೆ ವಿಚಾರದ ಬಗ್ಗೆ ಈಶ್ವರಪ್ಪ ಅವರು ಏನು ಹೇಳಿದ್ದಾರೆ ಅನ್ನೋದರ ಬಗ್ಗೆ ಗೊತ್ತಿಲ್ಲ. ಪರಸ್ಪರ ಕುಳಿತು ಮಾತನಾಡಿದಾಗ ಸ್ಪಷ್ಟ ಮಾಹಿತಿ ಸಿಗುತ್ತದೆ. ಮೊನ್ನೆ ನಡೆದಂತಹ ಘಟನೆ ಮತ್ತು ಎಫ್ ಐ ಆರ್ ಆದಂತಹ ಸಂದರ್ಭ ಸಂಬಂಧಿಸಿದಂತೆ ಕೆಲವು ವಿಚಾರ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದರು.
ಪ್ರತಿಪಕ್ಷಗಳು ಈ ವಿಚಾರದಲ್ಲಿ ತಪ್ಪು ಕಂಡುಹಿಡಿಯಲು ಪ್ರಯತ್ನ ಮಾಡುತ್ತಿವೆ. ತನಿಖೆಯಲ್ಲಿ ಸತ್ಯಾಂಶ ಹೊರಬರುತ್ತದೆ. ಇದರಲ್ಲಿ ಯಾರು ಪಾತ್ರ ವಹಿಸಿದ್ದಾರೆ ಎಂಬ ಬಗ್ಗೆ ತನಿಖೆ ಆಗಲಿದೆ. ಕಾನೂನುಪ್ರಕಾರ ತನಿಖೆ ನಡೆಯಲಿದ್ದು, ಇದರಲ್ಲಿ ಹಸ್ತಕ್ಷೇಪ ಮಾಡಲ್ಲ. ಈ ಘಟನೆ ಬಗ್ಗೆ ವರಿಷ್ಠರಿಗೆ ಎಲ್ಲಾ ವಿಚಾರ ಗೊತ್ತಿದೆ. ನಾನು ಕೂಡ ತಿಳಿಸಿದ್ದೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.