ಸುಳ್ಯ:ತಾಲೂಕಿನ ಪಂಜ ಸಮೀಪದ ಕೃಷ್ಣನಗರ ಬಳಿಯಲ್ಲಿನ ಚಿಂಗಾಣಿಗುಡ್ಡೆಯಲ್ಲಿ ದೊಡ್ಡ ಮೊತ್ತದ ಹಣ ವ್ಯಯ ಮಾಡಿ ಕಟ್ಟಲಾಗಿರುವ ನೀರಿನ ಟ್ಯಾಂಕ್ ಇದೀಗ ಯಾವುದೇ ಉಪಯೋಗಕ್ಕೆ ಬಾರದೆ ಹಾಗೆಯೇ ಬಿದ್ದಿದೆ.
ಸಾರ್ವಜನಿಕ ಉಪಯೋಗಕ್ಕೆ ಬಾರದ ಚಿಂಗಾಣಿಗುಡ್ಡೆ ಬೃಹತ್ ನೀರಿನ ಟ್ಯಾಂಕ್ ತಾಲೂಕಿನ ಪಂಜ ಗ್ರಾ.ಪಂ ವ್ಯಾಪ್ತಿಯ ಐವತ್ತೊಕ್ಲು ಗ್ರಾಮದ ಚಿಂಗಾಣಿಗುಡ್ಡೆ ಎಂಬಲ್ಲಿ ಜಿಲ್ಲಾ ಪಂಚಾಯಿತಿ ಸುಮಾರು 20 ಲಕ್ಷ ಅನುದಾನದಲ್ಲಿ ಕಳೆದ 7 ವರ್ಷಗಳ ಹಿಂದೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ನೀರು ಶುದ್ಧೀಕರಣ ಟ್ಯಾಂಕ್ನ್ನು ನಿರ್ಮಿಸಿದೆ. ಆದರೆ ಇದುವರೆಗೆ ಈ ಟ್ಯಾಂಕ್‍ಗೆ ಒಂದು ತೊಟ್ಟು ನೀರು ಬಿದ್ದಿಲ್ಲ.
ಚಿಂಗಾಣಿಗುಡ್ಡೆ ಅತೀ ಎತ್ತರದ ಪ್ರದೇಶವಾಗಿದ್ದು, ಸುಮಾರು 6 ಕಿ.ಮೀ. ದೂರದ ಪುಳಿಕುಕ್ಕುದಲ್ಲಿರುವ ಕುಮಾರಧಾರ ನದಿಯಿಂದ ಜಾಕ್‍ವೆಲ್ ನಿರ್ಮಿಸಿ ನೀರು ಸರಬರಾಜು ಮಾಡಲು ಪೈಪ್ಲೈನ್ ಹಾಕಿ ಪಂಪ್ ಕೂಡ ಅಳವಡಿಸಲಾಗಿದೆ. ದುರಾದೃಷ್ಟವಶಾತ್ ಕಳೆದ ಏಳು ವರ್ಷಗಳು ಕಳೆದರೂ ಟ್ಯಾಂಕ್‍ಗೆ ಒಂದು ಲೀಟರ್ ನೀರು ಬಂದಿಲ್ಲ. ಪರಿಣಾಮ ಟ್ಯಾಂಕ್ ಪಾಳು ಬಿದ್ದಿದ್ದು, ಶಿಥಿಲಗೊಂಡಿದ್ದು ಸುತ್ತಮುತ್ತ ಗಿಡಗಂಟಿ, ಪೊದೆ ಬೆಳೆದಿವೆ.
ಇನ್ನೊಂದೆಡೆ, ಟ್ಯಾಂಕ್ ಅನ್ನು ಅವೈಜ್ಞಾನಿವಾಗಿ ನಿರ್ಮಾಣ ಮಾಡಲಾಗಿದ್ದು, ಇದರ ನಿರ್ಮಾಣದ ಬಿಲ್ಗಳಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.