ಮಂಗಳೂರು: ಕೆಸರು ಗದ್ದೆಯಲ್ಲಿ ಬೊಂಬಾಟ್ ಓಟ.. ಡಿಜೆ ಸಾಂಗ್ಗೆ ಸಖತ್ ಕುಣಿತ... ಕೆಸರು ಗದ್ದೆಯಲ್ಲೇ ವೆರೈಟಿ ವೆರೈಟಿ ಆಟ..ಇವೆಲ್ಲಾ ಕೆಸರುಮಯ ಗದ್ದೆಯಲ್ಲಿ ದೇಶಿ ಕ್ರೀಡೆಗಳ ದೃಶ್ಯ ಕಂಡುಬಂದಿದ್ದು ಕಡಲನಗರಿ ಮಂಗಳೂರಿನಲ್ಲಿ..
ಹೌದು, ನಗರದ ಹೊರವಲಯದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವರ ಬಾಕಿಮಾರು ಗದ್ದೆಯಲ್ಲಿ ತುಳುನಾಡ ಕೃಷಿ ಜನಪದೋತ್ಸವದಲ್ಲಿ ದೇಶಿ ಕ್ರೀಡೆಗಳ ಸಂಭ್ರಮ ಕಳೆಗಟ್ಟಿತ್ತು. ಈ ಕೆಸರು ಗದ್ದೆಯ ಕ್ರೀಡಾಕೂಟವನ್ನು ತುಳುನಾಡಿನ ಹಳ್ಳಿ ಪರಂಪರೆಯನ್ನು ನೆನಪಿಸುವ ದೃಷ್ಟಿಯಿಂದ ಸುಮಾರು ಹತ್ತು ವರ್ಷಗಳಿಂದ ಆಯೋಜಿಸಲಾಗುತ್ತದೆ.
ಕೆಸರುಗದ್ದೆ ಓಟ, ಹಿಮ್ಮುಖ ಓಟ, ಹಗ್ಗಜಗ್ಗಾಟ, ಜಾನಪದ ನೃತ್ಯ, ಪಿರಮಿಡ್ ರಚಿಸಿ ಮಡಿಕೆ ಒಡೆಯುವುದು, ನೀರು ತುಂಬಿದ ಕೊಡಗಳನ್ನು ಹೊರಿಸಿ ಯುವತಿಯರನ್ನು ಓಡಿಸುವುದು, ತೆಂಗಿನ ಗರಿ ಹೆಣೆಯುವುದು, ಮಡಿಕೆ ಒಡೆಯುವುದು ಹೀಗೆ ಎಲ್ಲಾ ಕರಾವಳಿಗರ ಹಳೆಯ ಜೀವನ ಪದ್ಧತಿಯನ್ನು ಆಧುನಿಕ ಕಾಲದಲ್ಲಿ ನೆನಪಿಸುವ ಮೂಲಕ ನಮ್ಮ ಪಾರಂಪರಿಕ ಕೃಷಿ ಪರಂಪರೆ ಮುಂದಿನ ಜನಾಂಗಕ್ಕೂ ತಿಳಿಸುವ ಪ್ರಯತ್ನ ಮಾಡ್ತಿದ್ದೇವೆ ಅಂತಾರೆ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ.
ಗದ್ದೆಯಲ್ಲಿ ದೇಶಿ ಕ್ರೀಡೆಗಳ ಕಲರವ ಇನ್ನು, ಆಟವಾಡಿದ ಕೆಸರು ಗದ್ದೆಯನ್ನು ಕೆಲವೇ ದಿನಗಳಲ್ಲಿ ಉತ್ತಿ, ಬಿತ್ತಿ ಭತ್ತದ ಕೃಷಿ ಮಾಡಿ ದೇವಸ್ಥಾನದಲ್ಲಿ ಸಂರಕ್ಷಿಸಿಡಲಾಗುತ್ತದೆ. ಮುಂದಿನ ದಿನಗಳಲ್ಲಿ ಅಕ್ಕಿ ಮಾಡಿ, ಬರುವ ವರ್ಷಕ್ಕೆ ಅದೇ ಅಕ್ಕಿಯನ್ನು ದೇವಳದ ಕಾರ್ಯಕ್ರಮದಲ್ಲಿ ಗಣ್ಯರಿಗೆ ಮಾನ್ಯತೆಯ ರೂಪದಲ್ಲಿ ನೀಡಲಾಗುತ್ತೆ. ಅಲ್ಲದೆ ಈ ಕೃಷಿ ಕಾರ್ಯಕ್ಕೆ ಸ್ಥಳೀಯ ಶಾಲೆಯ ಮಕ್ಕಳು ಕೈಜೋಡಿಸುತ್ತಾ ಬಂದಿದ್ದಾರೆ.
ಒಟ್ಟಿನಲ್ಲಿ ಮಕ್ಕಳಿಗೆ ಸಮಾಜ ಯಾವ ಶಿಕ್ಷಣ ನೀಡುತ್ತದೆಯೋ ಅದೇ ರೀತಿ ಬೆಳೆಯುತ್ತಾರೆ. ಈ ನಿಟ್ಟಿನಲ್ಲಿ ಕೃಷಿ ಜನಪದೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ದೇಶಿ ಪರಂಪರೆಯ ಸೊಗಡನ್ನ ಮಕ್ಕಳು ಸವಿದು, ಅನುಸರಿಸಿ ಬೆಳೆಸುವಂತೆ ಮಾಡುತ್ತಿರುವುದು ಶ್ಲಾಘನೀಯ.