ಬಂಟ್ವಾಳ (ದಕ್ಷಿಣ ಕನ್ನಡ) :ಬಿಲ್ಲವ ಸಮುದಾಯವನ್ನು ಅವಗಣನೆ ಮಾಡಿ ಟಾರ್ಗೆಟ್ ಮಾಡಿದ್ದಾರೆ. ಹೀಗೆಯಾದರೇ ರಾಜಕೀಯ ಪಕ್ಷಗಳು ಮುಂಬರುವ ಚುನಾವಣೆಗಳಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.
ಬಂಟ್ವಾಳದ ಮೆಲ್ಕಾರ್ ನ ಬಿರ್ವ ಸೆಂಟರ್ನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ದೇಶದ 15 ರಾಜ್ಯಗಳಲ್ಲಿ ಬಿ.ಕೆ ಹರಿಪ್ರಸಾದ್ ಪ್ರಭಾರಿಗಳಾಗಿದ್ದಾರೆ. ಹರಿಪ್ರಸಾದ್ ಅವರು ಹಿಂದುಳಿದ ಸಮುದಾಯದ ನಾಯಕರಾಗಿದ್ದಾರೆ. ಹೀಗಾಗಿ ಅವರನ್ನು ರಾಜ್ಯ ಸರ್ಕಾರ ಮಂತ್ರಿಯನ್ನಾಗಿಸಬೇಕು. ಇಲ್ಲದಿದ್ದರೆ ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗು ಲೋಕಸಭಾ ಚುನಾವಣೆಗಳಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿ ಕೆ ಹರಿಪ್ರಸಾದ್ ಅವರನ್ನು ರಾಜಕೀಯವಾಗಿ ಸಂಪೂರ್ಣವಾಗಿ ಮುಗಿಸಬೇಕು ಎಂಬ ಹುನ್ನಾರ ನಡೆದಿದೆ. ಜನಾರ್ದನ ಪೂಜಾರಿ ಅವರನ್ನು ಸೈಡ್ ಲೈನ್ ಮಾಡಿದಂತೆ ಹರಿಪ್ರಸಾದ್ ಅವರನ್ನೂ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಶ್ರೀಗಳು ಆರೋಪಿಸಿದರು. ಚುನಾವಣೆ ಪೂರಕವಾಗಿ ರಾಜ್ಯ ಸರ್ಕಾರ ನೀವು ಘೋಷಿಸಿದಂತೆ 250 ಕೋಟಿ ರೂ. ಗಳನ್ನು ಇದೇ ತಿಂಗಳ 3 ರಂದು ನಡೆಯುವ ಬಜೆಟ್ ನಲ್ಲಿ ನಿಗಮಕ್ಕೆ ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಕಾನೂನಾತ್ಮಕ ವ್ಯವಸ್ಥೆ ಬುಡಮೇಲು ಮಾಡಲು ನಮ್ಮ ಯುವಕರು ಹೋಗದಂತೆ ಮಾಡಲು ಚಿಂತನೆ ನಡೆಸಲಾಗಿದೆ. ನಮ್ಮ ಸಮುದಾಯದ ಯುವಕರು ಪ್ರಕರಣಗಳನ್ನು ಮೈಮೇಲೆ ಎಳೆದುಕೊಳ್ಳಬಾರದು. ಬದುಕನ್ನು ಒತ್ತೆಯಿಟ್ಟು ಯಾರಿಗೋ ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದರು.