ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪತ್ನಿಯ ಮುಖದ ಭಾಗಕ್ಕೆ ಕಚ್ಚಿ ಮಾಂಸ ಹೊರತೆಗೆದು ವಿಕೃತಿ ಮೆರೆದಿದ್ದಾನೆ. ಘಟನೆ ಬೆಳ್ತಂಗಡಿ ಸಮೀಪದ ಶಿಶಿಲ ಎಂಬ ಗ್ರಾಮದಲ್ಲಿ ಸೋಮವಾರ ನಡೆದಿದೆ. ಮೂಲತಃ ಹಾವೇರಿ ನಿವಾಸಿ ಸುರೇಶ್ ಗೌಡ(55) ಹಲ್ಲೆ ಮಾಡಿದ ವ್ಯಕ್ತಿ.
ಸುರೇಶ್ ಗೌಡ ಕೋಟೆ ಬಾಗಿಲಿನಲ್ಲಿ ತನ್ನ ಪತ್ನಿಯ ತಂದೆ ನೀಡಿದ ಜಾಗದಲ್ಲಿ ಮನೆ ಮಾಡಿ ವಾಸವಾಗಿದ್ದು, ನಿನ್ನೆ ರಾತ್ರಿ ಮದ್ಯ ಸೇವಿಸಿ ಬಂದು ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಮುಖದ ಭಾಗಕ್ಕೆ ಕಚ್ಚಿದ್ದಲ್ಲದೇ ಮಾಂಸ ಹೊರತೆಗೆದಿದ್ದಾನೆ. ಕಣ್ಣಿಗೂ ಕಚ್ಚಿರುವ ಸುರೇಶ್ ಗೌಡ ಬಳಿಕ ಕೋಲಿನಿಂದ ಹೊಡೆದಿದ್ದಾನೆ. ಹಲ್ಲೆಯಿಂದ ಪತ್ನಿಯ ಎಡ ಭಾಗದ ಕಣ್ಣು ಸಂಪೂರ್ಣ ಹಾನಿಯಾಗಿದೆ. ಮಗಳ ತಲೆಯ ಭಾಗಕ್ಕೆ ಮತ್ತು ಕಣ್ಣಿಗೆ ಹೊಡೆದಿದ್ದು ಇಬ್ಬರಿಗೂ ಮಾರಣಾಂತಿಕ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ. ತಂದೆಯ ಹೊಡೆತದಿಂದ ತಪ್ಪಿಸಿಕೊಂಡ ಮಗಳು ನೆರೆ ಮನೆಗೆ ಓಡಿ ವಿಷಯ ತಿಳಿಸಿದ್ದಾಳೆ. ಅವರು ಆಗಮಿಸುತ್ತಿದ್ದಂತೆ ಆರೋಪಿ ಸುರೇಶ್, ತೋಟದೊಳಗೆ ತಪ್ಪಿಸಿಕೊಂಡಿದ್ದಾನೆ. ಸ್ಥಳಕ್ಕೆ ಬಂದ ನೆರೆಹೊರೆಯವರು, ವಿಪತ್ತು ನಿರ್ವಹಣಾ ತಂಡ ಹಾಗೂ ಪೊಲೀಸರು ಆರೋಪಿ ಸುರೇಶನನ್ನು ಹುಡುಕಾಡಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡ ತಾಯಿ ಮತ್ತು ಮಗಳು ಉಜಿರೆ ಖಾಸಗಿ ಆಸ್ಪತ್ರೆಗಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ತಾಯಿ ಮತ್ತು ಮಗಳ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.