ಪುತ್ತೂರು: ಜೊತೆಯಾಗಿ ಜ್ಯೂಸ್ ಕುಡಿಯುತ್ತಿದ್ದ ಸಹಪಾಠಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ವಿದ್ಯಾರ್ಥಿಯನ್ನು ಕರೆದೊಯ್ದು ಹಲ್ಲೆ ನಡೆಸಿದ ಘಟನೆ ಮಂಗಳವಾರ ಪುತ್ತೂರಿನಲ್ಲಿ ವರದಿಯಾಗಿದೆ. ನಗರದ ಪರ್ಲಡ್ಕ ಗೋಳಿಕಟ್ಟೆ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದಾನೆ.
ವಿದ್ಯಾರ್ಥಿ ತನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಬಸ್ ನಿಲ್ದಾಣದ ಬಳಿ ಜ್ಯೂಸ್ ಕುಡಿಯತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸುಮಾರು 15 ಜನರು ಗುಂಪು ಅಲ್ಲಿಗೆ ಆಗಮಿಸಿ ಆತನ ಹೆಸರು ಕೇಳಿ ಒತ್ತಾಯಪೂರ್ವಕವಾಗಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾಗಿರುವ ವಿದ್ಯಾರ್ಥಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. "ನಾನು ಮತ್ತು ನನ್ನ ತರಗತಿಯ ವಿದ್ಯಾರ್ಥಿನಿ ಜ್ಯೂಸ್ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ಸುಮಾರು ಹದಿನೈದು ಮಂದಿ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿಗಳು ನನ್ನ ಹೆಸರು ಕೇಳಿದರು. ನಾನು ಹೆಸರು ಹೇಳಿದ ಬಳಿಕ, ನಿನ್ನಲ್ಲಿ ಮಾತನಾಡುವುದಿದೆ ಎಂದು ರೂಂ ಒಂದಕ್ಕೆ ಕರೆದೊಯ್ದರು. ಅಲ್ಲಿ ಸುಮಾರು ನನಗೆ ಮೇಲೆ ವೈರ್ ಮತ್ತು ಲಾಠಿಯಿಂದ ಹೊಡೆದರು. ಪೊಲೀಸರಿಗೆ ದೂರು ನೀಡಿದರೆ ಪೋಕ್ಸೋ ಕಾಯ್ದೆ ದಾಖಲಾಗುವಂತೆ ಮಾಡುತ್ತೇವೆ ಎಂದು ಹೆದರಿಸಿದರು" ಎಂದು ತಿಳಿಸಿದ್ದಾನೆ.
ಖಂಡನೆ:ಪುತ್ತೂರಿನ ಎಸ್‍ಡಿಪಿಐ ಮತ್ತು ಮುಸ್ಲಿಂ ಯುವಜನ ಪರಿಷತ್ ಘಟನೆಯನ್ನು ಖಂಡಿಸಿದೆ. ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿದ ಎಸ್‍ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್ ಮತ್ತು ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಹಾಜಿ ಕಲ್ಲೇಗ ಅವರು ಚುನಾವಣೆ ಎದುರಿಸಲು ಈ ಹಲ್ಲೆ ನಡೆಸಲಾಗಿದೆ. ಇದು ಕೆಲವು ಗೂಂಡಾಗಳ ಕೃತ್ಯ. ಆರೋಪಿಗಳನ್ನು ತಕ್ಷಣವೇ ಪೊಲೀಸರು ಬಂಧಿಸಬೇಕು. ಇಲ್ಲದಿದ್ದರೆ ಪೊಲೀಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಬೆಳ್ತಂಗಡಿ ಯುವಕನ ಮೇಲೆ ನೈತಿಕ ಪೊಲೀಸ್ಗಿರಿ; ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲು