ಪುತ್ತೂರು:ರೈಲಿನ ಮೂಲಕ ಗುಜರಾತ್‌ಗೆ ಅಡಕೆ ಸಾಗಣೆಗೆ ಸಾಂಕೇತಿಕವಾಗಿ ಎಪಿಎಂಸಿ ಪ್ರಾಂಗಣದಲ್ಲಿ ಬುಧವಾರ ಪೂಜಾ ವಿದಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.
ಬೆಳಗ್ಗೆ ಎಪಿಎಂಸಿ ಪ್ರಾಂಗಣದಲ್ಲಿರುವ ಶ್ರೀ ನಾಗಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಲಾಯಿತು. ಬಳಿಕ ವೈದಿಕರು ಶ್ರೀ ನಾಗನಿಗೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಕ್ಯಾಂಪ್ಕೋ ವತಿಯಿಂದ ಎರಡು ಲೋಡ್ ಅಡಕೆಯನ್ನು ಹೊತ್ತ ಲಾರಿಗೆ ಅಳವಡಿಸಿದ ರಿಬ್ಬನ್ ಕತ್ತರಿಸಿ, ತೆಂಗಿನಕಾಯಿ ಒಡೆಯುವ ಮೂಲಕ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಉದ್ಘಾಟಿಸಿದರು.
ರೈಲಿನ ಮೂಲಕ ಪುತ್ತೂರಿನಿಂದ ಗುಜರಾತ್‌ಗೆ ಅಡಕೆ ಸಾಗಣೆಗೆ ಚಾಲನೆ ಬಳಿಕ ಮಾತನಾಡಿದ ಅವರು, ರೈತರು ಬೆಳೆಯುವ ಕೃಷಿ ಉತ್ಪನ್ನ ರೈಲಿನಲ್ಲಿ ಸಾಗಿಸುವ ಮೂಲಕ ರೈತರ ರೈಲಾಗಿ ಪರಿವರ್ತನೆ ಆಗಿರುವುದು ಮಹತ್ವದ ಯೋಜನೆಯಾಗಿದೆ. ರಾಜ್ಯದಲ್ಲಿ ಪುತ್ತೂರು ಎಪಿಎಂಸಿ ಪ್ರಪ್ರಥಮವಾಗಿ ಮೊದಲ ಹೆಜ್ಜೆಯಿಟ್ಟಿರುವುದು ಹೆಮ್ಮೆ ತಂದಿದೆ. ದೇಶದ ಎಲ್ಲಾ ರೈತರ ಕೃಷಿಯುತ್ಪನ್ನ ರೈಲಿನ ಮೂಲಕ ಸಾಗಬೇಕು ಎಂಬ ಪ್ರಧಾನಿಯವರ ಆಶಯ ಈಡೇರಿದ್ದು, ರಾಜ್ಯದ ಎಲ್ಲಾ ಕಡೆಗಳಲ್ಲಿ ಆರಂಭವಾಗಲಿ ಎಂದರು.
ಎಪಿಎಂಸಿ ಅಧ್ಯಕ್ಷ ದಿನೇಶ ಮೆದು ಮಾತನಾಡಿ, ಹಳ್ಳಿ ಹಳ್ಳಿಗಳಲ್ಲಿರುವ ರೈತರು ಬೆಳೆಯುವ ಕೃಷಿ ಉತ್ಪನ್ನ ದೂರದ ಗುಜರಾತ್ನನ್ನು ಕಡಿಮೆ ವೆಚ್ಚದಲ್ಲಿ ತಲುಪಿ, ಉತ್ತಮ ಧಾರಣೆ ಸಿಗಬೇಕೆಂಬ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರಕ್ಕೆ ಪುತ್ತೂರು ಶಾಸಕರ ನೇತೃತ್ವದಲ್ಲಿ 2-3 ಸಭೆಗಳನ್ನು ರೈಲ್ವೆ ಅಧಿಕಾರಿಗಳು, ಇಂಜಿನಿಯರ್‌ಗಳ ಮೂಲಕ ನಡೆಸಲಾಗಿತ್ತು. ಇದೀಗ ಇದು ಸಾಕಾರಗೊಂಡಿದೆ. ಸೆ.26ರ ತನಕ ಪ್ರಾಯೋಗಿವಾಗಿ ಅಡಕೆ ಸಾಗಿಸಲಾಗುವುದು. ಅ.3ಕ್ಕೆ ಈ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದರು.