ಪುತ್ತೂರು (ದಕ್ಷಿಣ ಕನ್ನಡ): ಸೋಮವಾರ ತಡರಾತ್ರಿ ಪುತ್ತೂರು ನೆಹರೂ ನಗರ ಜಂಕ್ಷನ್ನಲ್ಲಿ ನಡೆದ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಶರಣಾಗಿದ್ದು, ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ. ಒಟ್ಟು ನಾಲ್ವರು ಆರೋಪಿಗಳನ್ನು ನ.22ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಕ್ಷಯ್ ಕಲ್ಲೇಗ ಅವರ ಸ್ನೇಹಿತ ಚಿಕ್ಕಮುಡ್ನೂರು ಗ್ರಾಮದ ನಿವಾಸಿ ವಿಖ್ಯಾತ್ ಬಿ ಎಂಬವರು ನೀಡಿದ ದೂರಿನಂತೆ ಕೊಲೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಖ್ಯಾತ್ ನೀಡಿದ ದೂರಿನಲ್ಲಿ ಅಕ್ಷಯ್ ಕಲ್ಲೇಗ ಅವರ ಕೊಲೆ ಹಿಂದಿನ ಕಾರಣ ಬಯಲಾಗಿದೆ. ದೂರಿನ ಪ್ರಕಾರ, ನ. 6ರಂದು ರಾತ್ರಿ ಗೆಳೆಯ ಅಕ್ಷಯ್ ಕಲ್ಲೇಗ ಹಾಗೂ ಪ್ರಕರಣದ ಆರೋಪಿಗಳಾದ ಮನೀಶ್, ಚೇತನ್ ಅವರೊಂದಿಗೆ ದೂರವಾಣಿಯಲ್ಲಿ ಮಾತಿನ ಚಕಮಕಿಯಾಗಿತ್ತು. ಅದಾದ ನಂತರ ನಾನು ಹಾಗೂ ಅಕ್ಷಯ್ ಕಲ್ಲೇಗ ನೆಹರು ನಗರದ ಬಳಿಯಿರುವ ಎಟಿಎಂ ಪಕ್ಕದಲ್ಲಿ ನಿಂತುಕೊಂಡಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳಾದ ಚೇತನ್, ಮನೀಶ್, ಮಂಜ ಹಾಗೂ ಕೇಶವ ಫೋನ್ನಲ್ಲಿ ನಡೆದಿದ್ದ ಮಾತಿನ ಚಕಮಕಿ ಬಗ್ಗೆ ಮತ್ತೆ ತಕರಾರು ತೆಗೆದಿದ್ದರು. ಅಷ್ಟೇ ಅಲ್ಲದೆ ಅವಾಚ್ಯ ಪದಗಳಿಂದ ಬೈದು, ತಾವು ತಂದಿದ್ದ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಾನು ಓಡಿ ತಪ್ಪಿಸಿಕೊಂಡೆ. ಆದ್ರೆ, ಅಕ್ಷಯ್ ಕಲ್ಲೇಗನನ್ನು ಆರೋಪಿಗಳು ಸೇರಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿ ಹೋಗಿದ್ದಾರೆ ಎಂದು ವಿಖ್ಯಾತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು 341, 504, 506, 307, 302 ಜೊತೆಗೆ 34 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಬ್ಬರು ಆರೋಪಿಗಳು ಶರಣು: ಅಕ್ಷಯ್ ಕಲ್ಲೇಗ ಹತ್ಯೆ ಮಾಡಿದ್ದ ಸ್ವಲ್ಪ ಹೊತ್ತಲ್ಲೇ ಇಬ್ಬರು ಆರೋಪಿಗಳಾದ ದಾರಂದಕುಕ್ಕು ನಿವಾಸಿ ಮನೀಶ್ ಮತ್ತು ಖಾಸಗಿ ಬಸ್ ಚಾಲಕ ಬನ್ನೂರು ಕೃಷ್ಣನಗರ ನಿವಾಸಿ ಚೇತನ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಅವರನ್ನು ವಿಚಾರಣೆಗೊಳಪಡಿಸಿದ ಪೊಲೀಸರು ಕೃತ್ಯದಲ್ಲಿ ಇನ್ನಿಬ್ಬರು ಭಾಗಿಯಾಗಿರುವುದರ ಬಗ್ಗೆ ಮಾಹಿತಿ ಪಡೆದಿದ್ದರು. ಕೂಡಲೇ ಆ ಇಬ್ಬರು ಆರೋಪಿಗಳಾದ ಮಂಜುನಾಥ್ ಯಾನೆ ಹರಿ ಮತ್ತು ಕೇಶವ ಪಡೀಲ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.
ದೇರಳಕಟ್ಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ: ಗಂಭೀರವಾಗಿ ಗಾಯಗೊಂಡು ಅಕ್ಷಯ್ ಕಲ್ಲೇಗ ಸ್ಥಳದಲ್ಲೇ ಸಾವನ್ನಪ್ಪಿದ್ದರು. ರಾತ್ರಿ ಸುಮಾರು 1.30ರ ಸಮಯಕ್ಕೆ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಸಹಿತ ಪೊಲೀಸರ ತಂಡ ಭೇಟಿ ನೀಡಿ, ಮಹಜರು ನಡೆಸಿತ್ತು. ನಂತರ ಮೃತದೇಹವನ್ನು ಪೊಲೀಸರ ಸೂಚನೆಯಂತೆ ಅಕ್ಷಯ್ ಕುಟುಂಬದ ಗೋವರ್ಧನ್ ಕಲ್ಲೇಗ ಹಾಗೂ ಲೋಕೇಶ್ ಎಂಬವರು ಆಂಬ್ಯುಲೆನ್ಸ್ನಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದರು.
ಮೆರವಣಿಗೆಗೆ ಅವಕಾಶ ಕೊಡದ ಪೊಲೀಸರು:ಅಕ್ಷಯ್ ಅವರ ಪಾರ್ಥಿವ ಶರೀರರವನ್ನು ಪುತ್ತೂರಿಗೆ ತರುವ ವೇಳೆ ಕಬಕದಿಂದ ಮೆರವಣಿಗೆ ಮಾಡಲು ಸ್ನೇಹಿತ ಬಳಗದವರು ತೆರೆದ ಆಂಬ್ಯುಲೆನ್ಸ್ ಶೃಂಗಾರಗೊಳಿಸಿ ಸಿದ್ಧಪಡಿಸಿದ್ದರು. ಆದರೆ ಮೆರವಣಿಗೆಗೆ ಪೊಲೀಸರು ಅವಕಾಶ ನೀಡಿಲ್ಲ. ಈ ಬಗ್ಗೆ ಕಬಕದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮೆರವಣಿಗೆಗೆ ಅವಕಾಶ ಕೊಡದ ಕಾರಣ ಅಕ್ಷಯ್ ಅವರ ಪಾರ್ಥಿವ ಶರೀರವನ್ನು ನೇರವಾಗಿ ಅವರ ಶೇವಿರೆ ಮನೆಗೆ ತಂದರು. ಹೀಗಾಗಿ ಅಕ್ಷಯ್ ಅಭಿಮಾನಿ ಹಾಗೂ ಸ್ನೇಹಿತರ ಬಳಗ ಅಂತಿಮ ದರ್ಶನಕ್ಕಾಗಿ ಅಕ್ಷಯ್ ಅವರ ಮನೆಯಲ್ಲೇ ಜಮಾಯಿಸಿದ್ದರು.
"ನನ್ನ ಮಗನನ್ನು ಚುಚ್ಚಿ ಚುಚ್ಚಿ ಕೊಂದರು":ಅಕ್ಷಯ್ ಅವರ ಸಾವಿನ ಸುದ್ದಿ ತಿಳಿದು ತಂದೆ ಚಂದ್ರಶೇಖರ್ ಮತ್ತು ತಾಯಿ ಕಮಲ ಅವರ ಆಕ್ರೋಶ ಮತ್ತು ಆಕ್ರಂದನ ಮುಗಿಲು ಮುಟ್ಟಿತ್ತು. ಪಾರ್ಥಿವ ಶರೀರ ಮನೆಗೆ ತಂದ ವೇಳೆ ಮನೆ ಮಂದಿ ಅಕ್ಷಯ್ ಅವರನ್ನು ಕಂಡು ಕಣ್ಣೀರು ಹಾಕುತ್ತಿದ್ದರು. ತಂದೆ ಚಂದ್ರಶೇಖರ್ ಅವರು "ನನ್ನ ಮಗನನ್ನು ಚುಚ್ಚಿ ಚುಚ್ಚಿ ಕೊಂದರು. ನಾನು ಸತ್ತಾಗ ನನಗೆ ಬೆಂಕಿ ಇಡಬೇಕಾದ ಮಗನಿಗೆ ನಾನೇ ಬೆಂಕಿ ಇಡಬೇಕಾಯಿತಲ್ಲಾ" ಎಂದು ಪದೇ ಪದೆ ಹೇಳಿ ರೋದಿಸುತ್ತಿದ್ದ ದೃಶ್ಯ ಕರಳು ಹಿಂಡುವಂತಿತ್ತು.
ಸಾವಿರಾರು ಮಂದಿಯ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ:ಅಕ್ಷಯ್ ಕಲ್ಲೇಗ ಅವರ ಅಂತ್ಯಸಂಸ್ಕಾರ ಅವರ ಮನೆಯ ಸಮೀಪದ ತೋಟದ ಬದಿಯಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಅಶ್ರಫ್ ಕಲ್ಲೇಗ, ಶಿವರಾಮ ಆಳ್ವ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಕಬಕ ಗ್ರಾ.ಪಂ ಮಾಜಿ ಅಧ್ಯಕ್ಷ ವಿನಯ ಕಲ್ಲೇಗ ಸಹಿತ ಸಾವಿರಾರು ಮಂದಿ ಆಗಮಿಸಿ ಅಕ್ಷಯ್ ಕಲ್ಲೇಗ ಅವರ ಅಂತಿಮ ದರ್ಶನ ಪಡೆದರು.