ಮಂಗಳೂರು :ಕೇವಲ ಎರಡೂವರೆ ವರ್ಷದಲ್ಲಿ ಅದಾನಿ ಆಸ್ತಿಯು 10 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಇದರ ಹಿಂದಿರುವ ಮ್ಯಾಜಿಕ್ ಯಾವುದು?. ಈ ಬಗ್ಗೆ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರವನ್ನು ನೀಡಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2014ರಲ್ಲಿ ಅದಾನಿ ಬಳಿ ಬಂಡವಾಳ ಇದ್ದದ್ದು 50 ಸಾವಿರ ಕೋಟಿ ರುಪಾಯಿ. 2020ರಲ್ಲಿ 2 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಆದರೆ 2020ರ ನಂತರ ಕೇವಲ ಎರಡೂವರೆ ವರ್ಷದಲ್ಲಿ ಅವರ ಸಂಪತ್ತು 12 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ಹೇಗೆ ಸಾಧ್ಯವಾಯಿತು?. ಅವರಿಗೆ ಎಲ್ಲಾ ಪೌಷ್ಟಿಕ ಆಹಾರ ನೀಡಿದ್ದೇ ನರೇಂದ್ರ ಮೋದಿ ಸರ್ಕಾರ ಎಂದು ಟೀಕಾಪ್ರಹಾರ ನಡೆಸಿದರು.
ಸರ್ಕಾರಿ ಸ್ವಾಮ್ಯದ ಆಸ್ತಿಗಳಾದ ಬಂದರು, ಏರ್‌ಪೋರ್ಟ್‌ಗಳು, ರೈಲ್ವೆ ಇತ್ಯಾದಿಗಳನ್ನು ಅದಾನಿಗೆ ಹಸ್ತಾಂತರಿಸಿದ್ದಾರೆ. ಜನರಿಗೆ ಉಪಯೋಗವಾಗಬೇಕಾದ ಪ್ರಾವಿಡೆಂಟ್ ಫಂಡ್‌ನ್ನೂ ಅವರಿಗೆ ನೀಡಿದ್ದಾರೆ. ನರೇಂದ್ರ ಮೋದಿ ಹೊರ ದೇಶಗಳಿಗೆ ಹೋಗುವಾಗ ಅದಾನಿಯನ್ನು ಜೊತೆಗೇ ಕರೆದೊಯ್ಯುತ್ತಾರೆ. ಹೊರದೇಶಗಳ ಉದ್ದಿಮೆದಾರರನ್ನು ನೇರವಾಗಿ ಮಾತನಾಡಿ ವ್ಯವಹಾರ ಮಾತುಕತೆ ನಡೆಸುತ್ತಾರೆ. ಯಾವ ಉದ್ಯಮಿಗೂ ಇಲ್ಲದ ಇಷ್ಟು ಪ್ರೋತ್ಸಾಹ ಕೇವಲ ಒಬ್ಬ ವ್ಯಕ್ತಿಗೆ ಮೋದಿ ಸರ್ಕಾರ ನೀಡಲು ಏನು ಕಾರಣ? ಅವರ ಮೇಲೆ ನಿಮಗೆ ಏಕೆ ಇಷ್ಟು ಪ್ರೀತಿ ಇದೆ. ಜನರ ಹಣ ಲೂಟಿ ಮಾಡಿ ಅವರಿಗೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು.