ಮಂಗಳೂರು: ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ಇಂದು ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಮಸ್ಯೆಗಳನ್ನು ಆಲಿಸಿದ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್., ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಮಂಗಳೂರಿನಲ್ಲಿ ಒಟ್ಟು 58 ಆಫ್ಘನ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ 11 ವಿದ್ಯಾರ್ಥಿಗಳು ಕಾರ್ಯ ನಿಮಿತ್ತ ಸ್ವದೇಶಕ್ಕೆ ತೆರಳಿದ್ದಾರೆ. ಉಳಿದ 47 ವಿದ್ಯಾರ್ಥಿಗಳು ಇಂದು ಪೊಲೀಸ್ ಕಮಿಷನರ್ ಭೇಟಿ ಮಾಡಿದ್ರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ವಿವಿಯಯಲ್ಲಿ ಓದುತ್ತಿರುವ ಆಫ್ಘನ್ ವಿದ್ಯಾರ್ಥಿನಿ ಫರ್ಕುಂದ, ತಾಲಿಬಾನ್ಗಳು ನಮ್ಮ ದೇಶದವರಲ್ಲ. ಆದರೆ, ಇದೀಗ ಅವರು ಅಫ್ಘಾನಿಸ್ತಾನವನ್ನು ಆಕ್ರಮಿಸಿದ್ದಾರೆ. ಇದರಿಂದ ಭಯಗೊಂಡಿರುವ ಆಫ್ಘನ್ನರು ದೇಶ ತೊರೆಯುತ್ತಿದ್ದಾರೆ. ನನ್ನ ಕುಟುಂಬದವರೂ ಆಫ್ಘನ್ನಲ್ಲಿಯೇ ಇದ್ದು, ನಾನು ಕರೆ ಮಾಡಿ ವಿಚಾರಿಸುತ್ತಿದ್ದೇನೆ.
ಇತ್ತೀಚಿನ ಬೆಳವಣಿಗೆ ಬಳಿಕ ನನ್ನ ತಾಯಿ ಹಾಗೂ ಸಹೋದರಿ ಹೊರಗೆ ಹೋಗುತ್ತಿಲ್ಲ. ತಾಲಿಬಾನಿಗಳಿಂದ ಮಹಿಳೆಯರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಹೆಣ್ಮಕ್ಕಳು ಶಾಲಾ- ಕಾಲೇಜು, ಉದ್ಯೋಗಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. ತಾಲಿಬಾನಿಗಳಿಗೆ ಮಹಿಳೆಯರೇ ಟಾರ್ಗೆಟ್ ಆಗಿದ್ದಾರೆ. ಆದರೂ, ಉಗ್ರರು ನಮ್ಮ ದೇಶ (ಅಫ್ಘಾನಿಸ್ತಾನ) ತೊರೆಯುವ ಭರವಸೆ ಇದೆ ಎಂದು ಹೇಳಿದರು.