ಮಂಗಳೂರು: ನಗರದಲ್ಲಿ 'ರಂಗ್ ದೇ ಬರ್ಸಾ' ಎಂಬ ಹೆಸರಿನಲ್ಲಿ ಹೋಳಿ ಆಚರಣೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೋಳಿ ಸಂಭ್ರಮದ ಕಾರ್ಯಕ್ರಮದಲ್ಲಿ ಡಿಜೆ ಪಾರ್ಟಿಯೊಂದಿಗೆ ಯುವಕ-ಯುವತಿಯರು ಬಣ್ಣ ಎರಚಿ ಸಂಭ್ರಮ ಪಡುತ್ತಿದ್ದರು. ಇದು ಅಶ್ಲೀಲ ವರ್ತನೆ ಎಂದು ಆರೋಪಿಸಿ ಹೋಳಿ ಸಂಭ್ರಮದ ಡಿಜೆ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಡಿಜೆ ಪಾರ್ಟಿಯ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನು ಪುಡಿಗೈದು ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರು ಹಾಗೂ ಆಯೋಜಕರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಆಯೋಜಕರು ಹಾಗೂ ಹಲವರ ಮೇಲೆ ಹಲ್ಲೆಗೂ ಯತ್ನಿಸಿದ ಘಟನೆ ನಡೆದಿದೆ. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಆರು ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.