ಮಂಗಳೂರು:ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆ (ಇಸ್ಮಾಯಿಲ್ ಕೆ.ಶಫಿ) ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದಾರೆ. ಪುತ್ತೂರು ಕ್ಷೇತ್ರದ ಎಸ್ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಪಕ್ಷದ ಅಭ್ಯರ್ಥಿಯಾಗಿ ಇವರು ಕಣಕ್ಕಿಳಿದಿದ್ದಾರೆ.
ಶಾಫಿ ಬೆಳ್ಳಾರೆ ಅವರನ್ನು ಎನ್ಐಎ ಬಂಧಿಸಿತ್ತು. ಇದೀಗ ಜೈಲಿನಲ್ಲಿದ್ದು, ಅಲ್ಲಿಂದಲೇ ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಪುತ್ತೂರು ಕ್ಷೇತ್ರದ ಅಭ್ಯರ್ಥಿಯಾಗಿ ಮಾಡಲಾಗುವುದು ಎಂದು ಪಕ್ಷದ ಮುಖಂಡ ಅಬ್ದುಲ್ ಮಜೀದ್ ಕೆಲವು ತಿಂಗಳ ಹಿಂದೆ ಹೇಳಿಕೆ ನೀಡಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂಬ ಆಗ್ರಹ ಕೇಳಿಬಂದಿತ್ತು. ಶಾಫಿ ಬೆಳ್ಳಾರೆ ಈ ಹಿಂದೆ ದಕ್ಷಿಣ ಕನ್ನಡ, ಉಡುಪಿ ದ್ವಿಸದಸ್ಯ ಕ್ಷೇತ್ರದಲ್ಲಿ ವಿಧಾನ ಪರಿಷತ್ಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.