ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾದ ಸಂಶುಲ್ ಇಸ್ಲಾಂ ಅವರ ಉಪನ್ಯಾಸಕ್ಕೆ ಎಬಿವಿಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಬಿ ವಿ ಕಕ್ಕಿಲ್ಲಾಯ ಅವರ ಸ್ಮರಣಾರ್ಥ ಬಿ ವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸವನ್ನು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಸಂಶುಲ್ ಇಸ್ಲಾಂ ಅವರು ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಶುಲ್ ಇಸ್ಲಾಂ ಅವರ 'ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857- ಹೇಳದೆ ಉಳಿದ ಅದ್ಭುತ ಕಥೆಗಳು' ಎಂಬ ಕನ್ನಡ ಅನುವಾದದ ಕೃತಿಯನ್ನು ಬಿಡುಗಡೆಗೊಳಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಎಬಿವಿಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾಲಯ ಕಾಲೇಜಿನ ಹೊರಭಾಗದ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಕಾಲೇಜಿನ ಎಬಿವಿಪಿ ವಿದ್ಯಾರ್ಥಿಗಳು ಕೂಡ ಕಾಲೇಜಿನ ಒಳಗೆ ಪ್ರತಿಭಟನೆ ನಡೆಸಿದರು.