ಮಂಗಳೂರು: ಕೊರೊನಾ ಹೆಸರಿನಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಎಂದು ಡಿವೈಎಫ್ಐ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳು ಒತ್ತಾಯಿಸಿದವು.
ಇಂದು ನಗರದ ಕೊಡಿಯಾಲ್ ಬೈಲ್ನ ಸಿಬಿಇಯುನಲ್ಲಿ ನಡೆದ ಸಾಮಾಜಿಕ ಕಾರ್ಯಕರ್ತರ ದುಂಡು ಮೇಜಿನ ಸಭೆಯಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಸೇವಾ ಕ್ಷೇತ್ರವಾದ ಆಸ್ಪತ್ರೆಗಳು ವ್ಯಾಪಾರಿ ಕ್ಷೇತ್ರಗಳಾಗಿವೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ ಬಳಿಕ ಖಾಸಗಿ ಆಸ್ಪತ್ರೆಗಳ ವ್ಯಾಪಾರೀಕರಣ ಎಲ್ಲರ ಕಣ್ಣಿಗೆ ಕಾಣುವಂತೆ ಕಂಡು ಬರುತ್ತಿದೆ. ಸಾರ್ವಜನಿಕ ಆರೋಗ್ಯ ಸೇವೆಯನ್ನು ಸರ್ಕಾರ ಕಡೆಗಣಿಸಿರುವುದೇ ಇದಕ್ಕೆಲ್ಲ ಮೂಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ನಿಗದಿತ ದರ ವಿಧಿಸಿದ್ದರೂ ಯಾವುದನ್ನೂ ಪಾಲಿಸುತ್ತಿಲ್ಲ. ಸರ್ಕಾರ ವಿಧಿಸಿರುವ ದರವನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು ಎಂಬ ಕಾನೂನು ಇದ್ದರೂ ಖಾಸಗಿ ಆಸ್ಪತ್ರೆಗಳು ತಮಗೆ ಇಷ್ಟ ಬಂದಂತೆ ಲಕ್ಷಾಂತರ ರೂ. ದರ ವಿಧಿಸಿ ಜನರನ್ನು ಪೀಡಿಸುತ್ತಿವೆ. ಈ ಬಗ್ಗೆ ನಾನು ಸಾಕಷ್ಟು ದೂರು ನಿಡಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಹಿರಿಯ ವೈದ್ಯರಾದ ಡಾ. ಶ್ರೀನಿವಾಸ್ ಕಕ್ಕಿಲಾಯ, ಡಿಎಸ್ಎಸ್ ಮುಖಂಡ ಎಂ.ದೇವದಾಸ್, ಸಾಮಾಜಿಕ ಮುಖಂಡರಾದ ಎಂ.ಜಿ.ಹೆಗಡೆ, ರೆನ್ನಿ ಡಿಸೋಜ, ಮಾಜಿ ಉಪ ಮೇಯರ್ ಮೊಹಮ್ಮದ್ ಕುಂಜತ್ ಬೈಲ್, ಪುರುಷೋತ್ತಮ ಚಿತ್ರಾಪುರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್, ಫಾರೂಕ್ ಉಳ್ಳಾಲ್, ಖ್ಯಾತ ವಕೀಲರಾದ ದಿನೇಶ್ ಹೆಗ್ಡೆ ಉಳೇಪಾಡಿ, ದಯಾನಾಥ್ ಕೋಟ್ಯಾನ್, ಯಶವಂತ ಮರೋಳಿ, ಮತ್ತಿತರರು ಉಪಸ್ಥಿತರಿದ್ದರು.