ಬಂಟ್ವಾಳ : ಮರದಿಂದ ಅಡಕೆ ತೆಗೆಯುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲಾಯಿಬೆಟ್ಟು ಎಂಬಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ. ಬೋಳಿಯಾರು ಗ್ರಾಮದ ನಿವಾಸಿ ಇಬ್ರಾಹಿಂ ಎಂಬುವರ ಪುತ್ರ ಶಾಫಿ (28) ಮೃತ ದುರ್ದೈವಿ.
ಶಾಫಿ ಅವರು ಕಳೆದ ಅನೇಕ ವರ್ಷಗಳಿಂದ ಅಡಿಕೆ ವ್ಯವಹಾರ ನಡೆಸುತ್ತಿದ್ದರು. ಈ ವರ್ಷ ಅಡಿಕೆ ಕೀಳಲು ಸಾವಿರಾರು ರೂ. ನೀಡಿ ಹೊಸ ಸಲಾಕೆಯನ್ನು ಖರೀದಿಸಿದ್ದರು. ನಿನ್ನೆ ಅದೇ ಹೊಸ ಸಲಾಕೆಯಲ್ಲಿ ಮಲಾಯಿಬೆಟ್ಟುವಿನ ತೋಟದಲ್ಲಿ ಅಡಿಕೆ ಕೀಳುವ ವೇಳೆ ಶಾಫಿ ಅವರ ಕೈಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಹಾದು ಹೋಗಿರುವ ಎಲ್.ಟಿ.ವಯರ್ಗೆ ತಾಗಿದೆ.
ಪೈಬರ್ ಸಲಾಕೆಯಲ್ಲಿ ಅಡಕೆ ಕೀಳಲು ಅಳವಡಿಸಿದ ಕಬ್ಬಿಣದ ಕತ್ತಿಯ ಮೂಲಕ ವಿದ್ಯುತ್ ಹರಿದು ಶಾಫಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೀಪಮುನ್ನೂರು ಗ್ರಾಮದ ಮೂಸಬ್ಬ ಎಂಬುವರ ತೋಟದಲ್ಲಿ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಸಜೀಪಮುನ್ನೂರು ಗ್ರಾಮಕರಣಿಕೆ ಸ್ವಾತಿ, ಮೆಸ್ಕಾಂನ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ :ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಾಜೆ ನಿವಾಸಿ ಸವಾದ್ (35) ಎಂಬುವರ ಮೃತದೇಹ ಚಾರ್ಮಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 10 ದಿನಗಳಿಂದ ಸವಾದ್ ನಾಪತ್ತೆಯಾಗಿದ್ದ. ಈತ ಗಾಂಜಾ ವ್ಯಸನಿಯಾಗಿದ್ದು, ಈ ಹಿಂದೆಯೂ ಕೆಲವು ಬಾರಿ ನಾಪತ್ತೆಯಾಗಿ, ಕೆಲ ದಿನಗಳ ಬಳಿಕ ಮನೆಗೆ ವಾಪಸಾಗುತ್ತಿದ್ದ. ಈ ಬಾರಿಯೂ ಅದೇ ರೀತಿ ಹೋಗಿರಬಹುದು ಎಂದು ಮನೆಯವರು ಅಂದುಕೊಂಡಿದ್ದರು.