ಕಡಬ: ತಾಲೂಕಿನ ಬಿಳಿನೆಲೆ ಗ್ರಾಮದ ಬಾಗೈಮಲೆ ಎಂಬಲ್ಲಿ ಹರಿಯುತ್ತಿರುವ ಕೋಟೆ ಹೊಳೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಬಿಳಿನೆಲೆ ಗ್ರಾಮದ ಮೂಲೆಮನೆ ನಿವಾಸಿ ವೆಂಕಪ್ಪಗೌಡ (62) ಎಂಬವರ ಮೃತದೇಹವು ಬಾಗೈಮಲೆ ಎಂಬಲ್ಲಿ ಹರಿಯುತ್ತಿರುವ ಕೋಟೆ ಹೊಳೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮೃತ ವೆಂಕಪ್ಪ ಗೌಡ ಅವರ ಮಗ ಸುಬ್ರಹ್ಮಣ್ಯ ಎಂ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ರಾಮಪತ್ರೆ ಹೂ ಕೊಯ್ಯಲು ಕಾಡಿಗೆ ಹೋದ ವ್ಯಕ್ತಿಯ ಮೃತದೇಹ ನದಿಯಲ್ಲಿ ಪತ್ತೆ ಡಿ.5 ರಂದು ವೆಂಕಪ್ಪ ಗೌಡರು ನೆರೆ ಮನೆಯ ನಿವಾಸಿ ಬಾಲಚಂದ್ರ ಎಂಬವರೊಂದಿಗೆ ಕಾಡಿನಲ್ಲಿ ರಾಮಪತ್ರೆ ಎಂಬ ಹೂವುಗಳನ್ನು ಕೊಯ್ಯಲು ಹೋಗಿದ್ದಾರೆ ಎನ್ನಲಾಗಿದೆ. ಕಾಡಿನಲ್ಲಿ ದೂರಕ್ಕೆ ಎಲ್ಲೋ ಹೋಗಿರಬೇಕು ಎಂದು ಭಾವಿಸಿದ ಮನೆಯವರು ಸುಮ್ಮನೆ ಇದ್ದರು. ಆದರೆ ಡಿ. 10 ರಂದು ವೆಂಕಪ್ಪ ಗೌಡರು ಉಪಯೋಗಿಸುತ್ತಿದ್ದ ಟಾರ್ಚ್, ಸಿಗರ್‌ಲೈಟ್, ವಾಚ್ ಹಾಗೂ ಕತ್ತಿಯನ್ನು ಮನೆಯ ಬಾಗಿಲಿನ ಮೆಟ್ಟಿಲ ಬಳಿ ಯಾರೋ ತಂದಿರಿಸಿದ್ದರು. ಇದನ್ನು ಗಮನಿಸಿದ ಮನೆಯವರು ಅನುಮಾನಗೊಂಡು ಡಿ.11ರಂದು ನೆರೆಮನೆಯ ನಿವಾಸಿಗಳು ಹಾಗೂ ಸಂಬಂಧಿಕರು ಸೇರಿ ವೆಂಕಪ್ಪ ಗೌಡರನ್ನು ಕಾಡಿನಲ್ಲಿ ಹುಡುಕಾಟ ನಡೆಸುತ್ತಿರುವಾಗ ಅವರ ಮೃತದೇಹವು ಬಿಳಿನೆಲೆ ಗ್ರಾಮದ ಬಾಗೈಮಲೆ ಎಂಬಲ್ಲಿ ಹರಿಯುತ್ತಿರುವ ಕೋಟೆ ಹೊಳೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.