ಮಂಗಳೂರು:ಪುತ್ತೂರು ತಾಲೂಕಿನ ಹೊರವಲಯದ ತೆಂಕಿಲ ದರ್ಖಾಸು ಎಂಬಲ್ಲಿನ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಗೇರು ಮರವಿರುವ ಗುಡ್ಡದ ತಪ್ಪಲು ಪ್ರದೇಶದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಭೂಕಂಪದ ಭೀತಿ ಎದುರಾಗಿದೆ.
ಗುಡ್ಡದಲ್ಲಿ 200 ಮೀಟರ್ ಉದ್ದಕ್ಕೆ, ಅಲ್ಲದೆ ಗುಡ್ಡದ ಮೇಲೆಯೂ ಉದ್ದ ಮತ್ತು ಅಡ್ಡದ ಬಿರುಕು ಬಿಟ್ಟಿರುವುದು ಗೋಚರವಾಗಿದೆ.
ಬಿರುಕು ಬಿಟ್ಟ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಪದ್ಮಶ್ರೀ ಹಾಗೂ ಅಂತರ್ಜಲ ಪರಿಶೋಧಕಿ ವಸುಧಾ ಸ್ಥಳಕ್ಕೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲಿಸಿದ ಬಳಿಕ ಗುಡ್ಡದಲ್ಲಿ ಭೂಕಂಪನ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಅಪಾಯದ ಸೂಚನೆ ನೀಡಿದ್ದಾರೆ. ಭಾನುವಾರ ತೆಂಕಿಲ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಅಲ್ಲದೆ ಇಲ್ಲಿನ ಸಮೀಪದ ಮೊರ್ಗೇಕಳ ಗರಡಿಯ ಬಳಿ ಭೂಮಿಯ ಅಡಿಯಿಂದ ಮಣ್ಣುಮಿಶ್ರಿತ ನೀರು ಮೇಲೆದ್ದು, ಕೆಳಭಾಗಕ್ಕೆ ಹರಿದು ಹೋಗುತ್ತಿದೆ. ಗುಡ್ಡದ ಮೇಲಿಂದಲೂ ನೀರು ಹರಿದು ಬರುತ್ತಿದೆ.
ಇದು ಭೂಕಂಪವಾಗುವ ಮುನ್ಸೂಚನೆ ನೀಡುತ್ತಿದ್ದು, ಇದರಿಂದ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ. ಪಕ್ಕದಲ್ಲಿಯೇ ರವಿ ಮತ್ತು ಹರೀಶ್ ಎಂಬವರಿಗೆ ಸೇರಿದ ನಿರ್ಮಾಣ ಹಂತದ ಮನೆಯ ಮೇಲೆ ಗುಡ್ಡ ಕುಸಿದು, ಅಪಾರ ನಷ್ಟ ಸಂಭವಿಸಿತ್ತು. ಈ ಹಿನ್ನಲೆಯಲ್ಲಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆ ಹಾಗೂ ಬಿರುಕು ಬಿಟ್ಟ ಸ್ಥಳ ಪರಿಶೀಲನೆ ನಡೆಸಿದ್ದ ಶಾಸಕ ಸಂಜೀವ ಮಠಂದೂರು ಅವರು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಭೂವಿಜ್ಞಾನ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಪದ್ಮಶ್ರೀ, ಅಂತರ್‍ಜಲ ಪರಿಶೋಧಕಿ ವಸುಧಾ ಇಂದು ತೆಂಕಿಲ ಗುಡ್ಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೆಂಕಿಲ ಗುಡ್ಡದಲ್ಲಿ ಬಿರುಕು ಬಿಟ್ಟ ಭೂಮಿ ಅಪಾಯದಲ್ಲಿ ಹಲವು ಮನೆಗಳು
ಗುಡ್ಡದ ಬುಡದಲ್ಲಿ ನಿರ್ಮಾಣ ಹಂತದ ಮನೆಯ ಮೇಲೆ ಗುಡ್ಡ ಕುಸಿತವಾಗಿ ಹಾನಿಯಾಗಿದ್ದು, ರಾಮ ಎಂಬುವರ ಕುಟುಂಬವನ್ನು ಸ್ಥಳಾಂತರಗೊಳ್ಳುವಂತೆ ಶಾಸಕರು ಸೂಚಿಸಿದ್ದರು. ಇದೇ ಭಾಗದಲ್ಲಿರುವ ಕೆಲವು ಮನೆಗಳು ಅಪಾಯದ ವಲಯದಲ್ಲಿವೆ. ಇನ್ನೂ ಗುಡ್ಡದ ತಪ್ಪಲಿನ ಕೆಳಭಾಗದಲ್ಲಿ ಸುಮಾರು 25ಕ್ಕೂ ಅಧಿಕ ಮನೆಗಳಿದ್ದು ಅಪಾಯದ ಸೂಚನೆಯಿಂದಾಗಿ ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಸುದ್ದಿಗಾರರಿಗೆ ಮಾಹಿತಿ ನೀಡಿದ ಪದ್ಮಶ್ರೀ, ಈ ಗುಡ್ಡದ ರಚನಾ ವಲಯ ಬಿರುಕುಬಿಟ್ಟಿದ್ದು, ಇದು ಅಪಾಯಕಾರಿ ವಲಯವಾಗಿದೆ. ತೇವಾಂಶ ರಹಿತ ಪದರವು ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಳ್ಳುತ್ತಿದ್ದು, ಒಳಗೆ ಶೇಖರಣೆಗೊಂಡ ನೀರು ಹೊರಹೋಗಲು ಸಾಧ್ಯವಾಗದೆ ಒತ್ತಡ ನಿರ್ಮಾಣವಾಗಿ ಬಿರುಕು ಬಿಟ್ಟಿದೆ. ಇದು ಲಘು ಭೂಕಂಪನದ ಸೂಚನೆಯಾಗಿದೆ. ಮಳೆಗಾಲವಾದ್ದರಿಂದ ಭೂಕಂಪನವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. ಅಲ್ಲದೆ ಭೂಕಂಪನ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಪ್ರದೇಶ ವಾಸಕ್ಕೆ ಯೋಗ್ಯವಾಗಿಲ್ಲ. ಗುಡ್ಡದಲ್ಲಿ ಅಲ್ಲಲ್ಲಿ ತೂತುಗಳನ್ನು ಕೊರೆದು ಶೇಖರಣೆಗೊಂಡ ನೀರು ಹೊರಹೋಗುವಂತೆ ಮಾಡುವುದರಿಂದ ತಾತ್ಕಾಲಿಕವಾಗಿ ಅಪಾಯ ತಡೆಯಬಹುದಾಗಿದೆ. ಆದರೆ ಇದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂದು ಅವರು ತಿಳಿಸಿದ್ದಾರೆ.