ಚಿತ್ರದುರ್ಗ:ಮೊಳಕಾಲ್ಮೂರು ತಾಲೂಕಿನ ರಾಂಪುರ ಭಾಗದ ಬಿಜೆಪಿ ಮುಖಂಡ, ಜಿ.ಪಂ ಮಾಜಿ ಸದಸ್ಯ ನಾಗಿರೆಡ್ಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮುಲು ವಿರೋಧಿ ಮಾಜಿ ಶಾಸಕ ತಿಪ್ಪೇಸ್ವಾಮಿಯನ್ನು ಹೊಗಳಿದ್ದರಿಂದ ಶಾಸಕ ಶ್ರೀ ರಾಮುಲುಗೆ ವೇದಿಕೆಯಲ್ಲೇ ಇರುಸು ಮುರುಸಾಯಿತು.
ತುಂಗಭದ್ರದಿಂದ ಹಿನ್ನೀರು ತರುವ ಯೋಜನೆಯಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ ಶ್ರಮ ಹೆಚ್ಚಿದೆ ಎಂದು ನಾಗಿರೆಡ್ಡಿಯವರು ಪ್ರಸ್ತಾಪಿಸಿದ ಬೆನ್ನಲ್ಲೇ ಶಾಸಕ ಶ್ರೀ ರಾಮುಲು ಆಕ್ರೋಶಕೊಂಡರು.
ಅದೇ ವೇದಿಕೆಯಲ್ಲಿದ್ದ ಶಾಸಕ ಶ್ರೀ ರಾಮುಲು ಮಾತನಾಡಿ, ನಾಗಿರೆಡ್ಡಿಗೆ ತಿಪ್ಪೇಸ್ವಾಮಿ ಮೇಲೆ ಪ್ರೀತಿ ಬಂದುಬಿಟ್ಟಿದೆ. ಈ ಯೋಜನೆ ಬಗ್ಗೆ ನಾಗಿರೆಡ್ಡಿಗೆ ಸರಿಯಾದ ಮಾಹಿತಿ ಇಲ್ಲ. ಕೆಲವರು ಬಾಯಿ ಚಪಲಕ್ಕೆ ಮಾತನಾಡುತ್ತಾರೆ ಅದಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ. ತುಂಗಭದ್ರಾ ಹಿನ್ನೀರು ತರಲು ಹಲವು ಮುಖಂಡರು ಶ್ರಮಿಸಿದ್ದಾರೆ. ಯಾರದೋ ಕೆಲಸಕ್ಕೆ ನನಗೆ ಹೆಸರು ಬರುತ್ತಿದೆ ಅಂದುಕೊಂಡಿದ್ದಾರೆ. ಯಾರೋ ಅಧಿಕಾರದಲ್ಲಿದ್ದಾಗ ಮಂಜೂರಾದ ಯೋಜನೆ, ಇನ್ಯಾರೋ ಅಧಿಕಾರದಲ್ಲಿದ್ದಾಗ ಚಾಲನೆ ನೀಡುವುದು ಸಹಜ ಎಂದರು.
ಇನ್ನೂ ಲೋಕಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಲೋಕಸಮರದಲ್ಲಿ ಕಾಂಗ್ರೆಸ್ಗೆ 14ಸಾವಿರ ಲೀಡ್ ಕೊಟ್ಟಿದ್ದೀರಿ. ಆದರೂ ನಾನು ತಲೆಕೆಡಿಕೊಳ್ಳುವುದಿಲ್ಲ ನನ್ನ ಕೆಲಸ ನಾನು ಮಾಡುತ್ತೇನೆ ಎಂದು ನಾಗಿರೆಡ್ಡಿಗೆ ತಿರುಗೇಟು ನೀಡಿದರು.
ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಹಾಗೂ ರಾಮುಲು ನಡುವೆ ಜಟಾಪಟಿ ನಡೆದಿದ್ದು, ನನಗೆ ಟಿಕೆಟ್ ತಪ್ಪಿಸಿ ತಾನೇ ಬಂದಿದ್ದಾನೆ ಎಂದು ಶ್ರೀರಾಮುಲು ವಿರುದ್ದ ತಿಪ್ಪೇಸ್ವಾಮಿ ತಿರುಗಿಬಿದ್ದಿದ್ದರು. ಆದರೆ ಇವರಿಬ್ಬರ ನಡುವೆ ಮತ್ತೆ ತಿಕ್ಕಾಟ ಉಲ್ಬಣಿಸುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.