ಚಿತ್ರದುರ್ಗ/ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು ಮತಗಟ್ಟೆಗೆ ಆಗಮಿಸಿ ಮತ ಚಲಾವಣೆ ಮಾಡಿದರು.
ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಚಿತ್ರದುರ್ಗ ನಗರದ ಪಟ್ಟದ ಪರಮೇಶ್ವರಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಕುಟುಂಬ ಸಮೇತರಾಗಿ ಆಗಮಿಸಿ ಎಪಿಎಂಸಿ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 178ರಲ್ಲಿ ಮತದಾನ ಮಾಡಿದರು.
ಇನ್ನು ಜಿಲ್ಲೆಯ ಏಕೈಕ ಕೈ ಶಾಸಕ ರಘುಮೂರ್ತಿ ಜಿಲ್ಲೆಯ ಸ್ವಗ್ರಾಮದಲ್ಲಿ ಮತ ಚಲಾಯಿಸಿದರು. ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಗ್ರಾಮದ ಮತಗಟ್ಟೆ ಸಂಖ್ಯೆ 04ರಲ್ಲಿ ಚಳ್ಳಕೆರೆ ಕೈ ಶಾಸಕ ರಘುಮೂರ್ತಿ ಮತದಾನ ಮಾಡಿದರು. ಹಾಗೆಯೇ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರು ನಗರದ ಕುರುಬರ ಹಟ್ಟಿಯ ಮತಗಟ್ಟೆ ಸಂಖ್ಯೆ 53 ರಲ್ಲಿ ಮತದಾನ ಮಾಡಿ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಮತದಾರರಿಗೆ ಕರೆ ನೀಡಿದರು.