ಚಿತ್ರದುರ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಬ್ಬ ಡಕೋಟಾ ರಾಜಕಾರಣಿ. ಅದಕ್ಕೆ ಅವರಿಗೆ ಬಿಜೆಪಿ ಸರ್ಕಾರ ಮಾಡಿರುವ ಒಳ್ಳೆ ಕೆಲಸಗಳು ಕಾಣುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಒಬ್ಬ ಡಕೋಟಾ ರಾಜಕಾರಣಿ: ಸಚಿವ ಈಶ್ವರಪ್ಪ - Siddaramaiah
ನಾನು ಮುಂದಿನ ಸಿಎಂ ಆಗಲಿ ಎಂದು ಉಪ್ಪಾರ ಪೀಠದ ಜಗದ್ಗುರು ಪುರುಷೋತ್ತಮ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ. ಆದರೆ, ಸಿಎಂ ಆಗುವ ವಿಚಾರವಾಗಿ ಕೇಂದ್ರ ನಾಯಕರು, ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಆಕಸ್ಮಿಕವಾಗಿ ನಗರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡರು. ಅಲ್ಲದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು. ಭಾರತೀಯ ಜನತಾ ಪಾರ್ಟಿ ಫಾಸ್ಟ್ ಎಕ್ಸ್‌ಪ್ರೆಸ್ ಆಗಿ ಕೆಲಸ ಮಾಡುತ್ತಿದೆ. ಮುಂಬರುವ ಯಾವುದೇ ಚುನಾವಣೆಯಲ್ಲಿ ಬಿಜೆಪಿ ವಿಜಯಶಾಲಿಯಾಗಲಿದೆ. ಸಿದ್ದರಾಮಯ್ಯ ಮುಂದಿನ ಸಿಎಂ ನಾನೇ ಎಂದು ಹೇಳುತ್ತಿರುವುದರಲ್ಲಿ ಹುರಳಿಲ್ಲ. ಸಿಎಂ ಆಗಬೇಕಾದ್ರೆ ಶಾಸಕರು, ಜನರು ಹಾಗೂ ಕೇಂದ್ರ ನಾಯಕರ ಬೆಂಬಲ ಬೇಕಾಗುತ್ತದೆ. ನಾನೇ ಸಿಎಂ ಎಂದು ಡಿಕೆಶಿಯಿಂದ ಹೇಳಿಸಬೇಕಿತ್ತು. ಹಿಂದುಳಿದ, ದಲಿತ ನಾಯಕ ನಾನೇ ಎಂದು ಸ್ವಪ್ರತಿಷ್ಠೆ, ಅಹಂಕಾರದಲ್ಲಿದ್ದಾರೆ.
ರಾಜ್ಯದ ಕುರುಬರ ಪರವಾಗಿರುವೆ ಎಂದು ಹೇಳಿ ಜಾತಿಯ ವಿಷ ಬೀಜ ಬಿತ್ತಿ ಕುರಬರ ಮತ ಪಡೆದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಕಾಗಿನೆಲೆ ಪೀಠದ ಶ್ರೀಗಳು ಪಾದಯಾತ್ರೆಗೆ ಬೆಂಬಲ ನೀಡುತ್ತೇನೆ ಎಂದು ಆರ್‌ಎಸ್‌ಎಸ್ ಪಾದಯಾತ್ರೆಗೆ ಹಣ ನೀಡಿದೆ. ಸಮಾವೇಶ ಆರ್‌ಎಸ್‌ಎಸ್ ಮಾಡುತ್ತಿದೆ. ಹೀಗೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದರು. ಇನ್ನು ಶಾಸಕ ಯತ್ನಾಳ್ ಒಬ್ಬ ಪ್ರಭಾವಿ ರಾಜಕಾರಣಿ, ಕಠೋರ ಹಿಂದುತ್ವವಾದಿ, ಪಕ್ಷದ ಹಾಗೂ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿರುವುದಕ್ಕೆ ಕೇಂದ್ರ ನಾಯಕರು ನೋಟಿಸ್ ನೀಡಿದ್ದಾರೆ. ಯತ್ನಾಳ್ ಯಾವುದೇ ನೋವಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಬೇಕಾಗುತ್ತದೆ ಎಂದರಲ್ಲದೇ, ಅವರು ನನ್ನ ಒಳ್ಳೆಯ ಸ್ನೇಹಿತ ಎಂದರು.