ಚಿತ್ರದುರ್ಗ:ಸೂಕ್ತ ಬೆಲೆ ಸಿಗದಿದ್ದರಿಂದ ನೊಂದು ಜಿಲ್ಲೆಯ ಹಿರಿಯೂರು ತಾಲೂಕು ದಿಂಡವಾರ ಗ್ರಾಮದ ರೈತನೋರ್ವ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬಾಳೆ ಬೆಳೆಯನ್ನು ನಾಶ ಮಾಡಿದ್ದಾನೆ.
ರೈತ ಚಂದ್ರಗಿರಿ ಎಂಬುವರು ನೀರಿನ ಕೊರತೆಯ ನಡುವೆಯೂ 3 ಲಕ್ಷ ರೂ. ಖರ್ಚು ಮಾಡಿ ತನ್ನ ಹೊಲದಲ್ಲಿ ಸುಮಾರು 1,500 ಪಚ್ಚೆ ಬಾಳೆ ಹಾಗೂ ಪುಟ್ಬಾಳೆ ಬೆಳೆದಿದ್ದರು. ಆದರೆ, ಲಾಭದ ನಿರೀಕ್ಷೆಯಲ್ಲಿದ್ದ ಸಮಯದಲ್ಲಿ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಖರೀದಿದಾರರು ಸಿಗಲಿಲ್ಲ, ಸಿಕ್ಕರೂ ಕಡಿಮೆ ಬೆಲೆಗೆ ಖರೀದಿಸಲು ಮುಂದಾಗಿದ್ದರು. ಇದರಿಂದ ಬೇಸತ್ತ ರೈತ ಚಂದ್ರಗಿರಿ ಬೆಳೆ ನಾಶಪಡಿಸಿದ್ದಾರೆ.
ಲಾಕ್ಡೌನ್ ಕಾರಣ ಯಾವುದೇ ಶುಭ ಸಮಾರಂಭ, ಉತ್ಸವಗಳು ನಡೆಯದೆ ಬಾಳೆಗೆ ಬೇಡಿಕೆ ಕಡಿಮೆಯಾಗಿದೆ. ಇದರ ನೇರ ಪರಿಣಾಮ ಬೆಳೆಗಾರರ ಮೇಲೆ ಬಿದ್ದಿದೆ. ರೈತ ಚಂದ್ರಗಿರಿ ಬೆಳೆದ ಒಂದೊಂದು ಬಾಳೆ ಗೊನೆಗಳು ಸುಮಾರು 15ರಿಂದ 20 ಕೆಜಿ ತೂಕ ಹೊಂದಿದ್ದವು. ಇಷ್ಟು ಚೆನ್ನಾಗಿ ಬೆಳೆ ಬಂದರೂ ಕೊಳ್ಳುವವರು ಇರಲಿಲ್ಲ.