ಚಿತ್ರದುರ್ಗ: ಕಳೆದ ವರ್ಷ ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಸಿಕ್ಕಿತ್ತು. ಈ ವರ್ಷವೂ ನಿರೀಕ್ಷಿತ ಮಟ್ಟದಲ್ಲಿ ಈರುಳ್ಳಿಗೆ ಬೆಲೆ ಸಿಗುತ್ತದೆ ಎಂದು ಖಾಸಗಿ ಅಂಗಡಿಯಿಂದ ಬೀಜ ತಂದು ರೈತರು ಬಿತ್ತನೆ ಮಾಡಿದ್ರು. ಆದ್ರೆ ಹೊಲದಲ್ಲಿ ಬೆಳೆದ ಈರುಳ್ಳಿ ನೋಡಿದ ಅನ್ನದಾತರಿಗೆ ಬರ ಸಿಡಿಲು ಬಡಿದಂತಾಗಿದೆ.
ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ತಾಲೂಕಿನ ರೈತರು ಖಾಸಗಿ ಅಂಗಡಿಯಲ್ಲಿ ಖಾಸಗಿ ಕಂಪನಿಯೊಂದರ ಈರುಳ್ಳಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಬಳಿಕ ಅದು ನಕಲಿ ಬೀಜ ಎಂದು ತಿಳಿದುಬಂದಿದೆ. ಈರುಳ್ಳಿ ಬೆಳೆ ಬೆಳೆಯಲು ಸಾವಿರಾರು ರೂ. ಖರ್ಚು ಮಾಡಿದ್ದು, ಇದೀಗ ಆದಾಯವಿಲ್ಲದೆ ಅನ್ನದಾತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈರುಳ್ಳಿ ಬೆಳೆದ ಕೋಟೆನಾಡಿನ ಅನ್ನದಾತರಿಗೆ ಕಾದಿತ್ತು ಶಾಕ್; ಆಗಿದ್ದೇನು? ಹಿರಿಯೂರು ತಾಲೂಕಿನ ಗಿಡ್ಡೋಬನಹಳ್ಳಿ, ಮಲ್ಲಪ್ಪನಹಳ್ಳಿ ಗ್ರಾಮದ ರೈತರು ಹೆಚ್ಚಾಗಿ ಈರುಳ್ಳಿ ಬೀಜವನ್ನೇ ನಾಟಿ ಮಾಡಿದ್ದಾರೆ. ಹೊಲದಲ್ಲಿ ಈರುಳ್ಳಿ ಬೆಳೆ ಹಚ್ಚ ಹಸಿರಾಗಿ ಕಂಡರೂ ಇದೀಗ ನಕಲಿ ಬೀಜದ ತಳಿ ಎಂದು ತಿಳಿಯುತ್ತಿದ್ದಂತೆ ಹೊಲದಲ್ಲಿ ಬೆಳೆದ ಈರುಳ್ಳಿಯನ್ನು ಕೀಳಲು ಮುಂದಾಗಿದ್ದಾರೆ.
ನಕಲಿ ಬೀಜಗಳ ಮಾರಾಟ ಹಾವಳಿ ಹೆಚ್ಚಾಯಿತೇ?
ಉತ್ತಮ ಫಸಲು ನೀಡುವ ಈರುಳ್ಳಿ ಬೀಜ ಖರೀದಿಗೆ ಕೋಟೆನಾಡಿನ ಅನ್ನದಾತರು ಹೆಚ್ಚಾಗಿ ಚಿತ್ರದುರ್ಗ, ಚಳ್ಳಕೆರೆ ತಾಲೂಕಿನ ಖಾಸಗಿ ಅಂಗಡಿಗಳನ್ನೇ ಅವಲಂಬಿಸುತ್ತಾರೆ. ಆದ್ರೆ ಕಳಪೆ ಗುಣಮಟ್ಟದ ಬೀಜ ಖರೀದಿಸಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ನಕಲಿ ಈರುಳ್ಳಿ ಬೀಜ ಮಾರಾಟ ಹೆಚ್ಚಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ನಕಲಿ ಈರುಳ್ಳಿ ಬೀಜದ ಕಂಪನಿ ವಿರುದ್ಧ ಹಿರಿಯೂರು ತಾಲೂಕಿನ ರೈತರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಸಲಿ ಗೊತ್ತಾಗಿದ್ದು ಹೇಗೆ?
ಈರುಳ್ಳಿ ಬಿತ್ತನೆ ಮಾಡಿದ ಬಳಿಕ ಬೆಳೆ ಉತ್ತಮವಾಗಿ ಬೆಳೆಯಲು ಆರಂಭಿಸಿದೆ. ಇನ್ನೇನು ಈರುಳ್ಳಿ ಬೆಳೆ ಕಟಾವಿನ ಹಂತಕ್ಕೆ ತಲುಪಿತು ಎಂದು ರೈತರು ಸಂತಸದಲ್ಲಿದ್ದರು. ಈರುಳ್ಳಿ ಗಡ್ಡೆ ಹೇಗೆ ಬೆಳವಣಿಗೆ ಹೊಂದಿದೆ ಎಂದು ನೋಡಲು ಅನ್ನದಾತ ನೆಲದಿಂದ ಈರುಳ್ಳಿ ಕಿತ್ತ ಬಳಿಕಷ್ಟೇ ಅದರ ಅಸಲಿಯತ್ತು ಗೊತ್ತಾಗಿದೆ. ಬಳಿಕ ರೈತರು ಬೆಳೆದ ಈರುಳ್ಳಿಯನ್ನು ಅಧಿಕಾರಿಗಳ ಬಳಿ ತೋರಿಸಿದ್ದು, ತಾವು ಬೆಳೆದ ಈರುಳ್ಳಿ ಕಳಪೆ ಎಂದು ತಿಳಿಯುತ್ತಿದ್ದಂತೆ ರೈತರು ದಿಕ್ಕು ತೋಚದಂತಾಗಿದೆ. ಪರಿಣಾಮ ಜಿಲ್ಲೆಯಲ್ಲಿ ನಕಲಿ ಬೀಜಗಳ ಮಾರಾಟಕ್ಕೆ ಕಡಿವಾಣ ಹಾಕುವಂತೆ ಹಿರಿಯೂರು ತಾಲೂಕಿನ ಕೃಷಿಕರು ಆಗ್ರಹಿಸುತ್ತಿದ್ದಾರೆ.
ನಕಲಿ ಬೀಜದ ಕುರಿತು ಅಧಿಕಾರಿಗಳ ಮಾತೇನು?
ಈ ಕುರಿತು ಹಿರಿಯೂರು ತೋಟಗಾರಿಕೆ ಇಲಾಖೆ ಅಧಿಕಾರಿ ಲೋಕೇಶ್ ಅವರನ್ನು ಕೇಳಿದ್ರೆ, ರೈತರು ಈರುಳ್ಳಿ ಬೀಜ ಬಿತ್ತನೆ ಮಾಡುವ ಮುನ್ನ ಗುಣಮಟ್ಟದ ಕುರಿತು ಖಾತರಿ ಪಡಿಸಿಕೊಳ್ಳಬೇಕಿತ್ತು. ಈ ಕುರಿತು ಈಗಷ್ಟೇ ನಮಗೆ ಮಾಹಿತಿ ಬಂದಿದೆ. ಹಿರಿಯೂರು ತಾಲೂಕಿನಲ್ಲಿ ರೈತರು ಈರುಳ್ಳಿ ಬೀಜ ಖರೀದಿಸಿಲ್ಲ, ಬದಲಾಗಿ ಚಿತ್ರದುರ್ಗ, ಚಳ್ಳಕೆರೆ ಭಾಗದಲ್ಲಿ ಬೀಜ ಖರೀದಿಸಿದ್ದಾರೆ. ನಮ್ಮ ವ್ಯಾಪ್ತಿ ಪ್ರದೇಶದಿಂದ ಹೊರಗೆ ಜೀಜ ಖರೀದಿಸಿದ್ದಾರೆ. ನಕಲಿ ಬೀಜದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಅನ್ಯಾಯದ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದ್ದಾರೆ.