ಚಿತ್ರದುರ್ಗ:ಕೋಟೆಗಳ ನಗರಿ ಚಿತ್ರದುರ್ಗ ಜಿಲ್ಲೆ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಿಗೆ ರಾಜ್ಯದಲ್ಲೇ ಖ್ಯಾತಿ. ಕೋಟೆಕೊತ್ತಲಗಳಿಂದ ಕೂಡಿರುವ ಈ ನಾಡಿನಲ್ಲಿ ಹಾಲ್ನೊರೆಯಂತೆ ಜಲಪಾತ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
ಇಲ್ಲಿನ ಪ್ರವಾಸಿ ತಾಣಗಳಲ್ಲಿ ಐತಿಹಾಸಿಕ ಚಂದ್ರವಳ್ಳಿ ಕೂಡ ಒಂದು. ಚಂದ್ರವಳ್ಳಿ ಕೆರೆಯನ್ನು ಕದಂಬ ರಾಜ ಮಯೂರ ವರ್ಮ ನಿರ್ಮಿಸಿದ್ದು, ಉತ್ತಮ ಮಳೆಯಾದ ಪರಿಣಾಮ ಇದೀಗ ಬಹುವರ್ಷಗಳ ಬಳಿಕ ಚಂದ್ರವಳ್ಳಿ ಕೆರೆ ತುಂಬಿ ಕೋಡಿ ಒಡೆದಿದೆ.
ಚಂದ್ರವಳ್ಳಿ ಕೆರೆ ಕೋಡಿ ಒಡೆದ ಪರಿಣಾಮ ನೀರು ಜಲಪಾತದಂತೆ ಬಂಡೆ ಮೇಲಿಂದ ಬೀಳುತ್ತಿರುವುದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ವಿಶಾಲ ಬಂಡೆಗಳ ಮೇಲೆ ಜಲಧಾರೆ ಹರಿಯುತ್ತಿರೋ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಚಂದ್ರವಳ್ಳಿ ಕೆರೆಯತ್ತ ಲಗ್ಗೆ ಇಡುತ್ತಿದೆ.