ತೋಡ್ಲಾರಹಟ್ಟಿ ಬಳಿ ಬುಡಕಟ್ಟು ಸಂಸ್ಕೃತಿಯ ವಿಶೇಷ ಆಚರಣೆ ಚಳ್ಳಕೆರೆ (ಚಿತ್ರದುರ್ಗ): ತಾಲೂಕಿನ ನನ್ನಿವಾಳ ಕಟ್ಟೆಮನೆ ಗ್ರಾಮದ ಏಳು ಮಂದಿ ಹಿರಿಯರು, ಚನ್ನಳ್ಳಿ ಕುಲಬಾಂಧವರು ಹಾಗೂ ಕುಲಸಾವಿರದವರು ಸೇರಿ ಮಂಗಳವಾರ ಮತ್ತು ಬುಧವಾರ ತೋಡ್ಲಾರಹಟ್ಟಿ ಬಳಿ ಮುತ್ತಯ್ಯಗಳ ಶೂನ್ಯದ ಶ್ರೀಮಾರಮ್ಮದೇವಿಯ ದೇವರ ಎತ್ತಿನ ಗೂಡು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬುಡಕಟ್ಟು ಸಂಸ್ಕೃತಿಯನ್ನು ಎತ್ತಿ ತೋರಿಸುವಂತ ಆಚರಣೆಯಲ್ಲಿರುವುದು ವಿಶೇಷವಾಗಿದೆ.
ಮಂಗಳವಾರದಂದು ಶೂನ್ಯದ ಮಾರಮ್ಮದೇವಿಯ ದೇವರ ಎತ್ತಿನಗೂಡು (ಗುಡಿ) ನಡೆಯುವ ಜಾಗದಲ್ಲಿ ತಂಗಟೆ ರಂಬೆ, ಪುವಿಲಿ ಕಲ್ಲ, ಗಗಸೆ ರೆಂಬೆಗಳಿಂದ ಶ್ರೀಮುತ್ತೇಗಾರಲಿಂಗೇಶ್ವರಸ್ವಾಮಿ, ಶ್ರೀಬೊಮ್ಮಲಿಂಗೇಶ್ವಸ್ವಾಮಿ, ಬಂಗಾರದೇವರು, ಗಾದ್ರಿಪಾಲನಾಯ, ದಾಸಯ್ಯಯರ ದೇವರ ಪದಿಗಳನ್ನು ಗೂಡಿನ (ಕೊಠಡಿ) ರೂಪದಲ್ಲಿ ಕಿಲಾರಿಗಳು ಹಾಗೂ ಕುಲಬಾಂಧವರು ನಿರ್ಮಿಸುತ್ತಾರೆ.
ದೇವರ ಎತ್ತುಗಳ ಜತೆ ಭಕ್ತರ ವಾಸ್ತವ್ಯ: ದೇವರ ಎತ್ತುಗಳ ಮೂಲ ಗೂಡಿನಿಂದ ದೇವರ ಪದಿಗಳ (ದೇವರ ಹೆಸರಿನಲ್ಲಿ ತಾತ್ಕಲಿಕವಾಗಿ ನಿರ್ಮಿಸುವ ಗುಡ್ಲು) ಬಳಿ ತರುತ್ತಾರೆ. ಅಂದು ರಾತ್ರಿ ಭಕ್ತಾಧಿಗಳು ದೇವರ ಎತ್ತುಗಳಿಗೆ ತಾವು ತಂದ ಅಕ್ಕಿ, ರೊಟ್ಟಿ, ಬಾಳೆ ಹಣ್ಣು, ಬೆಲ್ಲವನ್ನು ಪ್ರಸಾದನ್ನಾಗಿ ನೀಡಿ, ದೇವರ ಎತ್ತುಗಳ ಜತೆಯೇ ವಾಸ್ತವ್ಯ ಹೂಡುತ್ತಾರೆ.
ಹುಲ್ಲಿನಿಂದ ಮಾರಮ್ಮ ದೇವಿ ಗೂಡಿ ನಿರ್ಮಾಣ: ದೇವರ ಎತ್ತುಗಳ ಕಾಯುವ ಗೋಪಾಲಕರು ಸೋಮವಾರ ಸಂಜೆಯ ಸಮಯದಲ್ಲಿ ಕಾಮ್ಸಿ ಹುಲ್ಲಿನಿಂದ (ಕಟ್ಟೆಗಳಲ್ಲಿ ಬೆಳೆಯುವ ಹುಲ್ಲು) ಗುಡಿ ನಿರ್ಮಿಸುತ್ತಾರೆ ಮತ್ತು ಹುತ್ತದ ಮಣ್ಣಿನಿಂದ ನಿರ್ಮಿಸಿದ ಮಾರಮ್ಮ ದೇವಿಯನ್ನು ರಾತ್ರಿ 12ಗಂಟೆಯ ಸಮಯದಲ್ಲಿ ವಾದ್ಯಗಳೊಂದಿಗೆ ಕರೆತಂದು ಪೂಜಿಸುತ್ತಾರೆ.
ಜ.18ರಂದು ಬೆಳಿಗ್ಗೆ 4ಗಂಟೆ ಸಮಯದಲ್ಲಿ ಮಾರಮ್ಮ ದೇವಿಗೆ ಸರ್ಗ ಹಾಕಲಾಗುವುದು. ನಂತರ ಮಧ್ಯಾಹ್ನ ತಮ್ಮ ಮನೆ ದೇವರುಗಳ ಎತ್ತುಗಳನ್ನು ತಮ್ಮ ಅಣ್ಣ-ತಮ್ಮಂದಿರ ಸಮ್ಮುಖದಲ್ಲಿ ಕಿಲಾರಿಗಳು ಪ್ರತ್ಯೇಕ ವಿಭಾಗ ಮಾಡಿಕೊಂಡು ಎತ್ತುಗಳನ್ನು ಮೂರು ಬಾರಿ ದೇವರ ಪದಿಗಳ ಮುಂದೆ ದಾಸಯ್ಯ ಅವರಿಂದ ಜಾಗಟೆ ಬಾರಿಸುವ ಮೂಲಕ ಮೆರೆಸುತ್ತಾರೆ.(ಓಡಿಸುತ್ತಾರೆ).
ಕಾಸು ಮಣೇವು: ದಾಸಯ್ಯರಿಂದ ಕಾಸು-ಮಣೇವು ಕಾರ್ಯಕ್ರಮ ಅದ್ದೂರಿಯಾಗಿ ಜರುಗುತ್ತದೆ. ಶೂನ್ಯದ ಮಾರಮ್ಮ ದೇವಿಯ ದೇವರ ಎತ್ತಿನ ಗೂಡಿನಲ್ಲಿ ಜಾಗಟೆ ಬಾರಿಸುವ ಮೂಲಕ ತಮ್ಮ ಭಕ್ತಿಯನ್ನು ಎಲ್ಲ ದೇವರುಗಳಿಗೆ ಸಮರ್ಪಣೆ ಮಾಡುವ ದಾಸಯ್ಯ ಅವರು ಬೆಳಗಿನಿಂದ ಪೂಜಾ ಕಾರ್ಯಗಳಲ್ಲಿ ಭಾಗವಹಿಸುವುದರಿಂದ, ಅವರಿಗೆ ಬೆಲ್ಲ, ಬಾಳೆ ಹಣ್ಣನ್ನು ಮಣೇವು ರೂಪದಲ್ಲಿ ಕೊಡಬೇಕು.
ಕಿಲಾರಿಗಳಿಂದ ಮುಡಿ ತೆಗೆಯುವ ಕಾರ್ಯಕ್ರಮ: ಎಲ್ಲ ಕಡೆ ಸೋದರ ಮಾವನಿಂದ ಮುಡಿ ತೆಗೆಯುವ ಕಾರ್ಯಕ್ರಮ ಜರುಗುತ್ತದೆ. ಆದರೆ, ಬುಡಕಟ್ಟು ಮ್ಯಾಸನಾಯಕರ ದೇವರ ಎತ್ತುಗಳ ಗೂಡಿನಲ್ಲಿ ಭಕ್ತಾಧಿಗಳು ತಮ್ಮ ಮಕ್ಕಳಿಗೆ ಮುಡಿ ತೆಗೆಸಬೇಕು ಎಂದು ಹರಕೆ ಹೊತ್ತರೆ, ಇಲ್ಲಿ ಕಿಲಾರಿಗಳು ಮುಡಿಯನ್ನು ತೆಗೆಯುತ್ತಾರೆ. ಮುಡಿ ತೆಗೆಯಲು ಕಿಲಾರಿಗಳಿಗೆ ಹೊಸಬಟ್ಟೆ, ,ಕಡ್ಲೆ, ಅಕ್ಕಿ ಮತ್ತು ಹಣವನ್ನು ಇಲ್ಲಿ ಕೊಡುತ್ತಾರೆ.
ಮಾರಮ್ಮ ದೇವಿ ಸಾಗಹಾಕುವುದು:ಹುಲ್ಲಿನ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದಂತೆ ಮಾರಮ್ಮ ದೇವಿಗೆ ಕುಲಬಾಂದವರಿಂದ ವಿಶೇಷ ಪೂಜೆ ಸಲ್ಲಿಸಿ ಮಾರಮ್ಮ ದೇವಿಯನ್ನು ಗುಡಿಯ ಸಮೇತವಾಗಿ ಪೂರ್ವ ದಿಕ್ಕಿಗೆ ಸಾಗು ಹಾಕುತ್ತಾರೆ.
ಇದನ್ನೂ ಓದಿ:ಸಕ್ಕರೆ ಕಾರ್ಖಾನೆ ಸುತ್ತಮುತ್ತಲ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಥೆನಾಲ್ ಉತ್ಪಾದಕ ಘಟಕ ಸ್ಥಾಪಿಸುವಂತಿಲ್ಲ: ಹೈಕೋರ್ಟ್