ಕರ್ನಾಟಕ

karnataka

ETV Bharat / state

ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರಿನ ಮಹಿಳೆ: ಐವರ ಬಾಳು ಬೆಳಗಿಸಿದ ಅಂಗಾಂಗ ದಾನ! - etv bharat karnataka

ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಮಾದರಿಯಾಗಿದ್ದಾರೆ.

woman-with-brain-dysfunction-donates-is-organs-in-chikkamagaluru
ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರಿನ ಮಹಿಳೆ: ಐದು ಜನರಿಗೆ ನೆರವಾದ ಅಂಗಾಂಗ ದಾನ

By

Published : Aug 7, 2023, 10:28 PM IST

Updated : Aug 7, 2023, 11:01 PM IST

ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರಿನ ಮಹಿಳೆ

ಚಿಕ್ಕಮಗಳೂರು:ಇಲ್ಲಿನ ಗೌರಿ ಕಾಲುವೆಯ ನಿವಾಸಿ ಸಹನಾ ಮೊಸೆಸ್ ಎಂಬವರು​ ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ. ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಒಂದಲ್ಲ, ಎರಡಲ್ಲ 5 ಜನರ ಬಾಳಿಗೆ ಬೆಳಕಾಗಿದ್ದಾರೆ.

ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಕುಟುಂಬದವರ ದೃಢ ನಿರ್ಧಾರ ಹಾಗೂ ಸಹನಾ ಅವರ ಆಸೆಯಂತೆಯೇ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಇಂದು ನಗರದ ಜಿಲ್ಲಾಸ್ಪತ್ರೆಯಲ್ಲಿ ಸಹನಾರ ಕಣ್ಣು, ಕಿಡ್ನಿ ಹಾಗೂ ಯಕೃತ್ತನ್ನು ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಆಂಬುಲೆನ್ಸ್ ಮೂಲಕ ಬೆಂಗಳೂರು ಮತ್ತು ಮಂಗಳೂರಿಗೆ ರವಾನಿಸಿದರು. ಸಹನಾರ ಅಂಗಾಂಗಗಳನ್ನು ಆಸ್ಪತ್ರೆಯಿಂದ ಹೊರತರುತ್ತಿದ್ದಂತೆಯೇ ಅವರ ಬಂಧು-ಬಳಗ, ಹಿತೈಷಿಗಳು ಅವರ ಭಾವಚಿತ್ರ ಹಿಡಿದು ನಮನ ಸಲ್ಲಿಸಿದರು.

ಸಹನಾ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರರಾದ ರೋಬಿನ್ ಮೊಸೆಸ್​ ಅವರ ಧರ್ಮಪತ್ನಿ. ಕೊರೊನಾ ಸಮಯದಲ್ಲಿ ಪತಿಯ ಜೊತೆ ನಿಂತು ಸಾಮಾಜಿಕ ಕೆಲಸಗಳನ್ನು ಮಾಡಿ ಗಮನ ಸೆಳೆದಿದ್ದರು. "ನಾವು ಸತ್ತ ಮೇಲೆ ದೇಹ ಮಣ್ಣಾಗುತ್ತದೆ, ಸುಟ್ಟರೆ ಬೂದಿಯಾಗುತ್ತೆ. ಒಂದು ವೇಳೆ ನಮ್ಮ ದೇಹದಲ್ಲಿರುವ ಅಂಗಾಂಗಗಳನ್ನು ಬೇರೆಯವರಿಗೆ ನೀಡಿದರೆ ಅವರ ಬದುಕು ಬೆಳಕಾಗುತ್ತದೆ. ಆದ್ದರಿಂದ ನಾವು ಸತ್ತ ಮೇಲೆ ನಮ್ಮಲ್ಲಿರುವ ಅಂಗಾಂಗಗಳನ್ನು ದಾನ ಮಾಡಿ, ಇತರರ ಬಾಳಿಗೆ ಬೆಳಕಾಗೋಣ" ಎಂದು ಸಹನಾ ನಿರ್ಧರಿಸಿದ್ದರು. ಅದೇ ರೀತಿ ಅವರ ಆಸೆಯಂತೆ ಕುಟುಂಬ ಸದಸ್ಯರು ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಪತಿ ರೋಬಿನ್ ಮೊಸೆಸ್​ ಮಾತನಾಡಿ, "ಕೊರೊನಾ ಸಮಯದಲ್ಲಿ ನಾವು ಅಂಗಾಂಗ ದಾನ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು. ಅದರಂತೆ ದೇಹದ ಯಾವ ಅಂಗಾಂಗಗಳು ಉಪಯೋಗಕ್ಕೆ ಬರುತ್ತವೆಯೋ ಅವುಗಳನ್ನು ದಾನ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಹೇಳಿದ್ದೆವು. ಅದೇ ಪ್ರಕಾರ ಇಂದು ಬೆಂಗಳೂರು ಮತ್ತು ಮಂಗಳೂರಿನ ವೈದ್ಯರು ಇಲ್ಲಿಗೆ ಬಂದು ಶಸ್ತ್ರಚಿಕಿತ್ಸೆ ನಡೆಸಿ ಅಂಗಾಂಗಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ನಾವು ಸತ್ತ ಮೇಲೆ ಮಣ್ಣಾಗುತ್ತೇವೆ, ಸುಟ್ಟರೆ ಬೂದಿಯಾಗುತ್ತೇವೆ ಅದರ ಬದಲು ಅಂಗಾಂಗ ದಾನ ಮಾಡಿದರೆ ಎಷ್ಟೋ ಜನರಿಗೆ ಉಪಯೋಗವಾಗುತ್ತದೆ" ಎಂದರು.

ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಮಾತನಾಡಿ, "ಸಹನಾರ ಮೆದುಳು ನಿಷ್ಕ್ರಿಯಗೊಂಡಿದೆ ಎನ್ನುವುದು ದೃಢಪಟ್ಟ ನಂತರ ರಾಜ್ಯ ಜೀವನ ಸಾರ್ಥಕತೆ ಸಂಸ್ಥೆಗಳ ಜೊತೆಗೆ ಸಮನ್ವಯ ಸಾಧಿಸಿ ಬೆಂಗಳೂರು ಮತ್ತು ಮಂಗಳೂರಿನ 2 ಆಸ್ಪತ್ರೆಗಳಿಗೆ ಅಂಗಾಂಗಗಳನ್ನು ರವಾನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದರು.

ಈ ಮೂಲಕ ಎರಡನೇ ಬಾರಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದಕ್ಕೂ ಮೊದಲು ಬಸ್‌ನಿಂದ ಬಿದ್ದು ಗಾಯಗೊಂಡು ಮೆದುಳು ನಿಷ್ಕ್ರಿಯತೆಗೊಳಗಾಗಿದ್ದ ವಿದ್ಯಾರ್ಥಿನಿ ರಕ್ಷಿತಾ ಬಾಯಿ ಅವರ ಅಂಗಾಂಗಗಳನ್ನು ದಾನ ಮಾಡಲಾಗಿತ್ತು.

ಇದನ್ನೂ ಓದಿ:ಮೆದುಳು ನಿಷ್ಕ್ರಿಯಗೊಂಡ ಪುತ್ರನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

Last Updated : Aug 7, 2023, 11:01 PM IST

ABOUT THE AUTHOR

...view details