ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸರು ಇಡೀ ಪೊಲೀಸ್ ಇಲಾಖೆಯೇ ಮೆಚ್ಚುವಂತಹ ಕೆಲಸ ಮಾಡಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಟಾಟಾ ಸುಮೋ ವಾಹನವನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತನೆ... ದಿನದ 24 ಗಂಟೆಯೂ ಜನರಿಗೆ ಸೇವೆ ಹೌದು, ಲಿಂಗದಹಳ್ಳಿಯ ಸ್ಥಳೀಯರಾದ ರುದ್ರೇಶ್ ಎಂಬುವರು ಪೊಲೀಸ್ ಸಿಬ್ಬಂದಿ ಸಂಚಾರಕ್ಕೆಂದು ಒಂದು ಟಾಟಾ ಸುಮೋ ವಾಹನ ನೀಡಿದ್ದಾರೆ. ಈಗಾಗಲೇ ಠಾಣೆಯಲ್ಲಿ ಒಂದು ಜೀಪ್ ಇದ್ದು, ಇನ್ನೊಂದು ವಾಹನವನ್ನು ಇಟ್ಟುಕೊಂಡು ಏನು ಮಾಡುವುದು ಎಂದು ಠಾಣೆಯ ಪಿಎಸ್ಐ ರಫೀಕ್ ಯೋಚನೆ ಮಾಡಿದ್ದಾರೆ. ಕೂಡಲೇ ರಫೀಕ್ ಅವರಿಗೆ ಉಪಾಯವೊಂದು ಹೊಳೆದಿದ್ದು, ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ಉತ್ತಮ ಆಲೋಚನೆ ಎಂದು ಈ ವಾಹನವನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದಾರೆ.
'ಆರಕ್ಷಕ ಜೀವ ರಕ್ಷಕ', 'ಮರಳಿ ಗೂಡಿಗೆ' ಎಂಬ ಶೀರ್ಷಿಕೆಯಡಿ ಈ ಆಂಬ್ಯುಲೆನ್ಸ್ಅನ್ನು ಸಿದ್ಧಪಡಿಸಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 30 ಸಾವಿರ ಜನಸಂಖ್ಯೆಯಿದ್ದು ಜನರಿಗೆ ಇದು ಹೆಚ್ಚು ಅನುಕೂಲವಾಗಲಿದೆ.
ಕೆಲ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಎಷ್ಟೇ ಫೋನ್ ಮಾಡಿದ್ರೂ ಕೂಡ ಆಂಬ್ಯುಲೆನ್ಸ್ ಸಿಗುವುದಿಲ್ಲ. ಅದಕ್ಕಾಗಿ ಲಿಂಗದಹಳ್ಳಿ ಪೊಲೀಸರು ಆಂಬ್ಯುಲೆನ್ಸ್ ರೆಡಿ ಮಾಡಿದ್ದು ತುರ್ತು ಸಂದರ್ಭದಲ್ಲಿ ಮಾತ್ರ ಈ ಆಂಬ್ಯುಲೆನ್ಸ್ ಅನ್ನು ಜನರು ಬಳಸಿಕೊಳ್ಳಬಹುದಾಗಿದೆ. ದಿನದ 24 ಗಂಟೆಯೂ ಈ ವಾಹನ ಪೊಲೀಸ್ ಠಾಣೆಯ ಆವರಣದಲ್ಲಿಯೇ ಇರುತ್ತದೆ. ಯಾರಿಗೆ ಅವಶ್ಯಕತೆ ಇರುತ್ತದೆಯೋ ಅವರು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ನೀವು ಇರುವ ಸ್ಥಳದಿಂದಲೇ ಪೊಲೀಸ್ ಠಾಣೆಗೆ ಫೋನ್ ಮಾಡಿದರೆ ಸಾಕು, ನೀವು ಇರುವ ಜಾಗಕ್ಕೆ ಆಂಬ್ಯುಲೆನ್ಸ್ ಬಂದು ನಿಲ್ಲುತ್ತದೆ.
ವಿಶೇಷವಾಗಿ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜನರಿಗೆ ಮಾತ್ರ ಇದು ಅನ್ವಯವಾಗಲಿದ್ದು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ರೀತಿಯ ಕಾರ್ಯಕ್ರಮವಾಗಿದೆ. ಆಂಬ್ಯುಲೆನ್ಸ್ ಅನ್ನು ವೈದ್ಯೆ ಐಶ್ವರ್ಯ ಅವರು ಉದ್ಘಾಟನೆ ಮಾಡಿ, ಪಿಎಸ್ಐ ರಫೀಕ್ ಅವರ ಈ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ಥಳೀಯರು ಸಹ ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.