ಚಿಕ್ಕಮಗಳೂರು: ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಬ್ಲೇಡ್ನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ರಾಜನ್ (50) ಆತ್ಮಹತ್ಯೆಗೆ ಯತ್ನಿಸಿರುವ ವಿಚಾರಣಾಧೀನ ಕೈದಿಯಾಗಿದ್ದು, ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಆದ್ರೆ ಎಂದಿನಂತೆ ಮುಂಜಾನೆ ಶೌಚಾಲಯಕ್ಕೆ ಹೋದ ಆತ, ಬ್ಲೇಡ್ನಿಂದ ತನ್ನ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬ್ಲೇಡ್ ಸಿಕ್ಕಿದ್ದು ಹೇಗೆ?:ಪ್ರತಿ ಭಾನುವಾರ ಕೈದಿಗಳಿಗೆ ತಮ್ಮ ಉಗುರುಗಳನ್ನು ಕತ್ತರಿಸಲು ಬ್ಲೇಡ್ ಹಾಗೂ ನೈಲ್ ಕಟರ್ಗಳನ್ನು ನೀಡಲಾಗುತ್ತದೆ. ಆದರೆ ಕೈದಿಯೊಬ್ಬ ತನಗೆ ಕೊಟ್ಟ ಬ್ಲೇಡನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟುಕೊಂಡಿದ್ದಾನೆ. ನಂತರ ಅದರಿಂದ ತನ್ನ ಕತ್ತನ್ನು ಸೀಳಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ನಂತರ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಕೈದಿಯನ್ನು ಕಂಡ ಅಧಿಕಾರಿಗಳು ಆತನನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಕೈದಿ ಈ ಘೋರ ಕೃತ್ಯಕ್ಕೆ ಮುಂದಾಗಿದ್ದ ಎಂಬುದು ಇನ್ನೂ ತಿಳಿದುಬಂದಿಲ್ಲ. ಬಸವನ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.