ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ಪಟ್ಟಣದ ಸುತ್ತಮುತ್ತ ಭಾನುವಾರ ಬಿರುಗಾಳಿಸಹಿತ ಭಾರಿ ಮಳೆ ಸುರಿಯಿತು. ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಉರುಳಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟರು. ಮೂಡಿಗೆರೆ ಪಟ್ಟಣದ ನಿವಾಸಿ ವೇಣುಗೋಪಾಲ್ (65 ವರ್ಷ) ಮೃತರೆಂದು ತಿಳಿದು ಬಂದಿದೆ.
ಇವರು ಮೂಡಿಗೆರೆ ಸಮೀಪದ ಚಿಕ್ಕಳ್ಳ ಎಂಬಲ್ಲಿ ಇರುವ ತಮ್ಮ ಮಧುವನ ಹೋಂ ಸ್ಟೇಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಸಂಜೆ ಸುಮಾರು 4.45 ಗಂಟೆಯ ಸಮಯದಲ್ಲಿ ಗಾಳಿಸಹಿತ ಮಳೆಗೆ ದೊಡ್ಡ ಗಾತ್ರದ ಮರ ಒಂದು ಸ್ಕೂಟಿ ಮೇಲೆ ಉರುಳಿ ಬಿದ್ದಿದೆ. ಪರಿಣಾಮ, ವೇಣು ಗೋಪಾಲ್ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
ವೇಣುಗೋಪಾಲ್ ಮೂಲತಃ ಹಾಸನದವರು. ಮೂಡಿಗೆರೆ ತಾಲೂಕು ಕೆಸವಳಲು ಗ್ರಾಮದ ರಾಧಾ ಅವರನ್ನು ವಿವಾಹವಾಗಿ ಮೂಡಿಗೆರೆಯಲ್ಲಿಯೇ ನೆಲೆಸಿದ್ದರು. ಹಲವು ವರ್ಷಗಳಿಂದ ಮೂಡಿಗೆರೆಯಲ್ಲಿಯೇ ಇದ್ದ ಇವರು ಪಟ್ಟಣದಲ್ಲಿ ಅಡ್ಯಂತಾಯ ರಂಗಮಂದಿರದ ಎದುರಿಗಿರುವ ಪಟ್ಟಣ ಪಂಚಾಯಿತಿ ಮಳಿಗೆಯಲ್ಲಿ ಈ ಹಿಂದೆ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದರು ಎಂದು ಪರಿಚಯಸ್ಥರು ಮಾಹಿತಿ ನೀಡಿದ್ದಾರೆ.
ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ವೇಣು ಅವರ ದುರಂತ ಸಾವಿನ ಸುದ್ದಿ ತಿಳಿದು ಅವರ ಸ್ನೇಹಿತರು, ಬಂಧುಗಳು ಅಪಾರ ಸಂಖ್ಯೆಯಲ್ಲಿ ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆ ಆವರಣದಲ್ಲಿ ನೆರೆದಿದ್ದರು. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನದಿಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಗಳು ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು:ಕಾಲೇಜಿನಿಂದ ಒಂದು ದಿನದ ಪ್ರವಾಸಕ್ಕೆ ಹೋಗಿದ್ದ ವಿದ್ಯಾರ್ಥಿಗಳ ಗುಂಪು ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ನೀರಿನಲ್ಲಿ ಮುಳುಗುತ್ತಿದ್ದ. ಇದನ್ನು ಕಂಡ ಇನ್ನೊಬ್ಬ ವಿದ್ಯಾರ್ಥಿ ಆತನನ್ನು ರಕ್ಷಣೆ ಮಾಡಲು ಹೋಗಿ ಇಬ್ಬರೂ ವಿದ್ಯಾರ್ಥಿಗಳು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಬಳಿಯ ನೆಮ್ಮಾರು ಸಮೀಪದ ತುಂಗಾ ನದಿಯಲ್ಲಿ ಭಾನುವಾರ ಬೆಳಗ್ಗೆ ದುರ್ಘಟನೆ ನಡೆದಿದೆ. ಮೃತ ವಿದ್ಯಾರ್ಥಿಗಳನ್ನು ಹರಿಹರಪುರದ ರಕ್ಷಿತ್ (20) ಹಾಗೂ ಶೃಂಗೇರಿ ಸುಂಕದ ಮಕ್ಕಿಯ ಪ್ರಜ್ವಲ್ (21) ಎಂದು ಗುರುತಿಸಲಾಗಿದೆ. ಇವರು ಶೃಂಗೇರಿ ಪಟ್ಟಣದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಸೇರಿಕೊಂಡು ಒಂದು ದಿನದ ಹೊರ ಸಂಚಾರಕ್ಕೆ ಹೋಗಿದ್ದರು. ನದಿ ನೀರಿನಲ್ಲಿ ಸ್ನೇಹಿತರೆಲ್ಲರೂ ಈಜಲು ತೆರಳಿದ್ದರು. ಈಜಾಡುತ್ತಿದ್ದಾಗ ರಕ್ಷಿತ್ ನೀರಿನಲ್ಲಿ ಸಿಲುಕಿಕೊಂಡು ಮುಳುಗುತ್ತಿದ್ದ. ಈ ವೇಳೆ ರಕ್ಷಿತ್‌ನ ರಕ್ಷಣೆಗೆಂದು ಪ್ರಜ್ವಲ್ ತೆರಳಿದ್ದನ. ಇದನ್ನು ನೋಡಿದ ವಿದ್ಯಾರ್ಥಿಗಳು ಕೂಡಲೇ ಸ್ಥಳೀಯರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸುತ್ತಲೂ ನುರಿತ ಈಜುಗಾರರು ಯಾರೂ ಇಲ್ಲದ ಕಾರಣ ನದಿಯಲ್ಲಿ ಇಬ್ಬರು ಯುವಕರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ರಾಜಧಾನಿಯಲ್ಲಿ ಸುರಿದಿದ್ದು ಕೇವಲ ಒಂದೇ ಗಂಟೆ ಮಳೆಗೆ ಟೆಕ್ಕಿ ಬಲಿ; ಅವಾಂತರಗಳ ಮಾಹಿತಿ