ಚಿಕ್ಕಮಗಳೂರು: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪೊಲೀಸ್ ಇನ್ಸ್ಪೆಕ್ಟರ್ ವೊಬ್ಬರಿಗೆ ಆವಾಜ್ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಹೊಸದಾಗಿ ಮಲ್ಲಂದೂರು ಠಾಣೆಯ ಚಾರ್ಜ್ ತೆಗೆದುಕೊಂಡ ರವೀಶ್‌ಗೆ ಪೋನ್ ಮಾಡಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ಮಾಡಿದ ತಪ್ಪಿಗೆ ಜಾತಿಯನ್ನ ಶಾಸಕ ಕುಮಾರಸ್ವಾಮಿ ಎಳೆದು ತಂದಿದ್ದಾರೆ.
ನನ್ನ ವಿರೋಧಿಗಳು ನನ್ನನ್ನ ಒಕ್ಕಲಿಗ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಈ ಹಿಂದೆ ಪಿಎಸ್ಐ ರವೀಶ್ ನನ್ನ ಬಳಿ ಬಂದಿದ್ದರು. ನೀವು ಮಂಡ್ಯದವರು, ಮಲ್ಲಂದೂರಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು, ಸಂಬಾಳಿಸುವುದು ಕಷ್ಟ ಎಂದೇಳಿ ಕಳಿಸಿದ್ದೆ. ಅದನ್ನು ಹೊರತುಪಡಿಸಿ ಯಾವುದೇ ಜಾತಿ ಜನಾಂಗದ ವಿಚಾರ ಅಥವಾ ಬೇರೆ ವಿಚಾರವನ್ನು ಕೇಳದೆಯೇ ಕಳಿಸಿಕೊಟ್ಟಿದ್ದೇನೆ ಎಂದು ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ಇದೀಗ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಗಮನಕ್ಕೆ ಬಾರದೆ ಕೆಲಸಕ್ಕೆ ಹಾಜರಾಗಿದ್ದು, ಆ ವ್ಯಾಪ್ತಿಯ ನಮ್ಮ ಕಾರ್ಯಕರ್ತರು ಹಾಗೂ ಮತದಾರರು ನನ್ನ ಮೇಲೆ ಒತ್ತಡ ಹಾಕಿರುವುದರಿಂದ ಒಬ್ಬ ಶಾಸಕನಾಗಿ ನಾನೇ ಮಾತನಾಡಬೇಕಿದೆ. ಏಕೆಂದರೆ ಪೊಲೀಸ್ ಠಾಣೆ ವಿಚಾರವಾಗಿ ಪ್ರತಿದಿನ ಹತ್ತಾರು ಕರೆಗಳು ನನಗೆ ಬರುತ್ತವೆ. ನಾನೇ ಖುದ್ದು ಅದನ್ನು ನಿವಾರಣೆ ಮಾಡಬೇಕಾದ್ದರಿಂದ ಅದು ನನ್ನ ಹೊಣೆಗಾರಿಕೆಯೂ ಸತ್ಯ ಎಂದಿದ್ದಾರೆ.