ಚಿಕ್ಕಮಗಳೂರು: ರಾಜ್ಯದ ಕೆಎಂಎಫ್ ಅನ್ನು ಗುಜರಾತ್‌ನ ಅಮುಲ್ ಜತೆಗೆ ಸೇರಿಸಲು ಹೊರಟಿದ್ದಾರೆ. ಬೊಮ್ಮಣ್ಣ ಇದಕ್ಕೆ ಕೈ ಹಾಕಿದರೆ ಕರ್ನಾಟಕದಲ್ಲಿ ಹಾಲಿನ ಕ್ರಾಂತಿ ಆಗಲ್ಲ. ರಕ್ತ ಕ್ರಾಂತಿ ಮಾಡಬೇಕಾಗುತ್ತೆ. ನಂದಿನಿ ನಮ್ಮ ಕರ್ನಾಟಕದ ಕನ್ನಡಿಗರ ಸ್ವತ್ತು ಎಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿಂದು ಜೆಡಿಎಸ್ನ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ಮಾರ್ವಾಡಿಗಳಿಗೆ ಮಾರಾಟ ಮಾಡಲು ನಾವು ತಯಾರಿಲ್ಲ. ಬೊಮ್ಮಾಯಿ, ಅಮಿತ್ ಶಾ ಏನಾದರೂ ಮಾಡಿ ಗುಜರಾತ್‌ನ ಅಮುಲ್ ಜತೆ ಸೇರಿಸಲು ಹೊರಟಿದ್ದಾರೆ. ಅದಾನಿ, ಅಂಬಾನಿ, ಲೋಪಾನಿ, ಕಲ್ಯಾಣಿ, ಚುಂಚಾಣಿ ಯಾವ ಸುಡುಗಾಡಿದಾವೋ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ಟೀಕಿಸಿದರು.
ಮೋದಿ ಹೇಳ್ತಾರೆ, ಗುಜರಾತ್ ಮಾಡೆಲ್ ಅಂತ ಸ್ವಾಮಿ. ನಮ್ಮೂರಲ್ಲಿ ಪಾನಿಪೂರಿ ಮಾರೋನು ಗುಜರಾತ್ ಅವನೇ, ನಿಮ್ಮ ಭಾಗ ನಮಗೆ ಬೇಕಾಗಿಲ್ಲ, ಕನ್ನಡಿಗರು ಕೊಡುವವರು, ಬೇಡುವವರಲ್ಲ. ಕನ್ನಡಿಗರು ಎಂದಿಗೂ ಸ್ವಾಭಿಮಾನಿಗಳು ಎಂದರು.
ವೈಎಸ್‌ವಿ ದತ್ತಾ ವಿರುದ್ಧ ಟೀಕೆ: ಕಡೂರಿನಲ್ಲಿ ಒಬ್ಬರು ಪುಣ್ಯಾತ್ಮರು ಇದ್ದರು. ಕೊಡೋ ಜಾಗದಲ್ಲಿ ಇಟ್ಟಿದ್ವಿ, ಬೇಡೋ ಜಾಗಕ್ಕೆ ಹೋಗಿದ್ದಾರೆ. ಕಾರ್ಯಕರ್ತರೇ ಇದು ನಿಮ್ಮ ಮನೆ, ನೀವೆಲ್ಲಾ ವಾಪಸ್ ಬನ್ನಿ, ಕೈಮುಗಿದು ಕೇಳಿ ಕೊಳ್ಳುತ್ತೇನೆ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.