ಚಿಕ್ಕಮಗಳೂರು:ಚುನಾವಣಾ ಆಯೋಗದ ನಿದೇರ್ಶನದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ವಿಚಕ್ಷಣಾ ದಳ ಹೈಅಲರ್ಟ್ ಆಗಿದೆ. ಈಗಾಗಲೇ ದಾಖಲೆ ಇಲ್ಲದ ಕೋಟ್ಯಂತರ ಮೌಲ್ಯದ ಚಿನ್ನ, ಲಕ್ಷಾಂತರ ಮೌಲ್ಯದ ಸೀರೆಗಳನ್ನು ವಶಪಡಿಸಿಕೊಂಡು ತೀವ್ರ ತನಿಖೆ ನಡೆಸುತ್ತಿದೆ.
ಗೋಲ್ಡ್ ಬಿಸ್ಕೆಟ್ಗಳು ಪೊಲೀಸರ ವಶ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದೆಡೆ ಚಿನ್ನ ಸಿಕ್ಕರೆ ಮತ್ತೊಂದೆಡೆ ಸೀರೆಗಳನ್ನು ವಶಕ್ಕೆ ಪಡೆದಿರುವ ಚುನಾವಣಾ ವಿಚಕ್ಷಣಾ ದಳದ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 9 ಕೆಜಿಗೂ ಅಧಿಕ ಬಂಗಾರದ ಸರ ಹಾಗೂ ಗೋಲ್ಡ್ ಬಿಸ್ಕೆಟ್‍ಗಳನ್ನ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದ್ದು, ಚುನಾವಣೆ ನಿಮಿತ್ತ ಜಿಲ್ಲೆಯ ಎಲ್ಲಾ ಗಡಿ ಭಾಗದಲ್ಲೂ ಪೊಲೀಸ್ ಇಲಾಖೆ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿದೆ.
ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ದಾಳಿ : ತರೀಕೆರೆ ತಾಲೂಕಿನ ಎಂಸಿಹಳ್ಳಿ ಚೆಕ್‍ಪೋಸ್ಟ್ ಬಳಿ ಇರುವ ಚೆಕ್‍ಪೋಸ್ಟ್ ಬಳಿ ಪಿಕ್‍ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 2 ಕೋಟಿ 30 ಲಕ್ಷ ಮೌಲ್ಯದ ಚಿನ್ನ ಹಾಗೂ ಚಿನ್ನದ ಬಿಸ್ಕೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪಿಕ್‍ಅಪ್ ವಾಹನ, ಗಾಡಿಯಲ್ಲಿದ್ದ ಇಬ್ಬರು ಹಾಗೂ ಚಿನ್ನವನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಈ ಚಿನ್ನವನ್ನ ಚುನಾವಣೆ ನಿಮಿತ್ತ ಖರ್ಚಿಗಾಗಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ಅಂದಾಜಿಸಲಾಗಿದೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಸುಮಾರು 666 ಕ್ಕೂ ಹೆಚ್ಚು ಸೀರೆ ವಶ : ಚುನಾವಣೆಗೆ ಹಂಚಲು ಸೀರೆಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿಕ್ಕಮಗಳೂರಿನ ಖಾಸಗಿ ಗೋದಾಮಿನಲ್ಲಿ ಸಾವಿರಾರು ಸೀರೆಗಳನ್ನು ಚುನಾವಣೆ ವೇಳೆ ಹಂಚಲೆಂದು ಸಂಗ್ರಹಿಸಿಡಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಚುನಾವಣಾ ವಿಚಕ್ಷಣಾ ದಳ ಸಿಬ್ಬಂದಿ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 666 ಕ್ಕೂ ಹೆಚ್ಚು ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ.