ಚಿಕ್ಕಮಗಳೂರು :ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದಕ್ಕೂ ಪೂರ್ವದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಇದು ನಾಯಕರು, ಮುಖಂಡರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವುದು ಸಾಮಾನ್ಯವಾಗಿದೆ. ಅದೇ ರೀತಿ ಕಾಂಗ್ರೆಸ್ಪಕ್ಷ ತೊರೆದು ಬಿಜೆಪಿ ಸೇರಿದ್ದಕ್ಕೆ ಮನೆಗೆ ನುಗ್ಗಿ ಕಾರ್ಯಕರ್ತನಿಗೆ ಮಾರಣಾಂತಿಕ ಹಲ್ಲೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿರುವಂತಹ ಗಂಭೀರ ಆರೋಪ ಕೇಳಿ ಬಂದಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡು ಬಂದಿವೆ. ರಾಜಕೀಯ ಪಕ್ಷಗಳು ತಮ್ಮದೇಯಾದ ತಂತ್ರಗಾರಿಕೆಯೊಂದಿಗೆ ಚುನಾವಣಾ ಪ್ರಚಾರದಲ್ಲಿವೆ.
ಹಾಗೆಯೇ ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಸಾಮಾನ್ಯವಾಗಿರುತ್ತೆ. ಅದರಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತನೊಬ್ಬನಿಗೆ ಕಾಂಗ್ರೆಸ್ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ನಾಗಲಾಪುರ ಸಮೀಪದ ರಾವುರು ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ಶಿವು ಕಳೆದ ತಿಂಗಳು ಕಾಂಗ್ರೆಸ್ ತೊರೆದು ಕೇಸರಿ ಪಡೆ ಸೇರಿದ್ದರು. ಇದು ಕಾಂಗ್ರೆಸ್ನವರ ಕಣ್ಣು ಕೆಂಪಗಾಗಿಸಿತ್ತು ಎನ್ನಲಾಗ್ತಿದೆ. ಬಿಜೆಪಿ ಸೇರಿದ ವಿಚಾರವಾಗಿ ಈ ಹಿಂದೆ ಶಿವು ಜೊತೆ ಶಾಸಕರ ಹಿಂಬಾಲಕರು ಗಲಾಟೆ ಕೂಡ ಮಾಡಿದ್ದರಂತೆ. ಅದರೇ ಬುಧವಾರ ಮನೆಗೆ ನಾಲ್ಕು ಜನರು ನುಗ್ಗಿ ಶಿವು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.