ಉರಿಗೌಡ ನಂಜೇಗೌಡ ಕುರಿತು ಸಿ ಟಿ ರವಿ ಮಾತನಾಡಿದರು ಚಿಕ್ಕಮಗಳೂರು: ಟಿಪ್ಪು ಸುಲ್ತಾನ್ ಮೈಸೂರು ಒಡೆಯರ್ಗೆ ಮೋಸ ಮಾಡಿದ ಎಂದು ಹೇಳಬೇಕಿಲ್ಲ. ಇತಿಹಾಸದಲ್ಲಿ ಒನಕೆ ಓಬವ್ವನ ಪಾತ್ರವನ್ನು ಗುರುತಿಸಿಕೊಳ್ಳುತ್ತಿದ್ದೇವೆ. ಸಾಮಾನ್ಯ ಗೃಹಿಣಿ ಒನಕೆ ಹಿಡಿದು ಹೈದರಾಲಿ ಸೈನಿಕರನ್ನು ಸದೆ ಬಡೆದಿದ್ದಳು ಎಂದು ಚಿಕ್ಕಮಗಳೂರಿನಲ್ಲಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ದೃಷ್ಠಿಯಲ್ಲಿ ಒನಕೆ ಓಬವ್ವ ಮಾಡಿದ್ದು ಅಪರಾಧವಾಗುತ್ತೆ. ಹೈದರಾಲಿ ವಿರುದ್ಧ ಮದಕರಿ ನಾಯಕ ಬಂಡಾಯ ಎದ್ದಿದ್ದು ಅಪರಾಧವಾಗುತ್ತೆ. ನಾವು ಇವಾಗ ಸಮಕಾಲೀನ ಪರಿಸ್ಥಿತಿಯಲ್ಲಿ ಇಲ್ಲ. ಸಮಕಾಲೀನ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ. ಕೆ. ಶಿವಕುಮಾರ್ ಅವರು ಹೈದರಾಲಿ ಜತೆಗೆ ನಿಂತುಕೊಳ್ತಿದ್ರು. ನಾವು ನಂಜರಾಜ ಒಡೆಯರ್ ಹಾಗೂ ಮಹಾರಾಣಿ ಲಕ್ಷ್ಮಮ್ಮಣ್ಣಿ ಜೊತೆ ನಿಲ್ಲುತ್ತಿದ್ದೆವು. ಟಿಪ್ಪು ಹಾಗೂ ಹೈದರಾಲಿ ಜೊತೆ ನಿಲ್ಲುವವರು ದ್ರೋಹಿ ಆಗ್ತಾರೆ. ಮಹಾರಾಣಿ ಲಕ್ಷ್ಮಮ್ಮಣ್ಣಿ ಜೊತೆ ನಿಲ್ಲುವವರು ದ್ರೋಹಿ ಆಗಲ್ಲ. ಲಕ್ಷ್ಮಮ್ಮಣ್ಣಿ ಸಾಮ್ರಾಜ್ಯ ಪುನರ್ ಸ್ಥಾಪಿಸದಿದ್ರೆ ಸಾಮಾಜಿಕ ನ್ಯಾಯ ಸಿಗುತ್ತಿರಲಿಲ್ಲ ಎಂದು ಟಿಪ್ಪು ಬೆಂಬಲಕ್ಕೆ ನಿಂತ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಸಿ ಟಿ ರವಿ ಕಿಡಿಕಾರಿದ್ದಾರೆ.
ದೇ ಜವರೇಗೌಡರು ಪುಸ್ತಕ ಬರೆದಿದ್ದು: ಟಿಪ್ಪು ಕೊಂದಿದ್ದು ಉರಿಗೌಡ ಮತ್ತು ನಂಜೇಗೌಡ ಎಂಬ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಇತಿಹಾಸವನ್ನು ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬ ಮಾತಿದೆ. 1994 ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಅವಾಗ ಸುವರ್ಣ ಮಂಡ್ಯ ಎಂಬ ಪುಸ್ತಕವನ್ನು ದೇ. ಜವರೇಗೌಡರು ಬರೆದಿದ್ದಾರೆ. ಆ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡರ ಪಾತ್ರವನ್ನೂ ಹೇಳಿದ್ದಾರೆ.
ಇದನ್ನ ಇವತ್ತು ಸೃಷ್ಟಿ ಮಾಡಿರೋದಲ್ಲ. ಈ ಕಥೆ ಬಿಜೆಪಿ ಅವರದು ಅಂತ ಆರೋಪ ಮಾಡುತ್ತಿದ್ದಾರೆ. ದೇ ಜವರೇಗೌಡರು 1994 ರಲ್ಲಿ ಪುಸ್ತಕವನ್ನು ಬರೆದಿದ್ದರು. ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದರು. 2006 ರಲ್ಲಿ ಪುನರ್ ಮುದ್ರಣಗೊಂಡ ಪುಸ್ತಕವನ್ನು ದೇವೇಗೌಡರು ಬಿಡುಗಡೆ ಮಾಡಿದ್ದರು. ಉರಿಗೌಡ, ನಂಜೇಗೌಡ ಸೇರಿದಂತೆ ಒಕ್ಕಲಿಗರು ಟಿಪ್ಪು ವಿರುದ್ಧ ತಿರುಗಿ ಬಿದ್ದಿದ್ರು. ಟಿಪ್ಪುವಿನ ನೀತಿ ಇದಕ್ಕೆ ಕಾರಣ ಎಂದಿದ್ದಾರೆ. ಟಿಪ್ಪು ಕೊಂದಿದ್ದು ಅಪರಿಚಿತರು ಎನ್ನುತ್ತಾರೆ. ನಾವು ಹೇಳುತ್ತೇವೆ ಉರಿಗೌಡ, ನಂಜೇಗೌಡರೇ ಕೊಂದಿದ್ದು ಎಂದು ಸಿ ಟಿ ರವಿ ವಿವರಣೆ ನೀಡಿದರು.
ಆಂಜನೇಯ ದೇವಾಲಯ ಮಸೀದಿಯಾಗಿ ಪರಿವರ್ತನೆ - ಸಿ ಟಿ ರವಿ: ನಾನು ಚಾಲೆಂಜ್ ಹಾಕ್ತೀನಿ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನ ಮಸೀದಿ ಆಗಿದ್ದು ಹೇಗೆ. ಟಿಪ್ಪು ಮತಾಂತರ ಅಲ್ಲದೆ ಇದ್ದಿದ್ರೆ ಆಂಜನೇಯ ದೇವಾಲಯವನ್ನು ಜಾಮಿಯ ಮಸೀದಿಯಾಗಿ ಪರಿವರ್ತನೆ ಮಾಡಿದವರು ಯಾರು ? ಎಂದು ಪ್ರಶ್ನೆ ಕೇಳಿದ್ದಾರೆ. ಕಾಲ ಎಲ್ಲವನ್ನೂ ನಿರ್ಣಯ ಮಾಡುತ್ತೆ, ಸ್ಪಷ್ಟವಾಗಿ ಹೇಳಿದ್ದೇನೆ, ಹೊಸ ಮಸೀದಿ ಕಟ್ಟಿ, ನಾವು ಖುಷಿ ಪಡ್ತೀವಿ. ದೇವಾಲಯ ಒಡೆದು ಮಸೀದಿ ಕಟ್ಟಿ ನಮಾಜ್ ಮಾಡಿದರೆ ಒಳ್ಳೆಯದು ಆಗಲು ಸಾಧ್ಯವೇ ಇಲ್ಲ. ಯಾಕಂದ್ರೆ ಹಿಂದೂಗಳ ಶಾಪ, ಆಕ್ರೋಶ, ನೋವು ಅವರಿಗೆ ಕಾಡ್ತಿರುತ್ತೆ. ಅಲ್ಲಿ ಒಳ್ಳೆಯದಾಗಲ್ಲ. ಭೂಮಿ ವಿಶಾಲವಾಗಿದೆ, ದೊಡ್ಡ ಮಸೀದಿ ಕಟ್ಲಿ, ಪ್ರಾರ್ಥನೆ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದರು.
ಹಿಂದೂಗಳ ದೇವಾಲಯ ಒಡೆದಿರುವುದು ನೋವು ಆಗಿರುತ್ತೆ. ಶಾಪ ಹಾಕ್ತಿರ್ತೀವಿ ಅದರಿಂದ ಅವರು ಉದ್ಧಾರ ಆಗಲ್ಲ. ಎಲ್ಲೆಲ್ಲಿ ದೇವಾಲಯಗಳನ್ನು ನಾಶ ಮಾಡಿ ಮಸೀದಿ ಕಟ್ಟಿದ್ದಾರೆ ಅವರ ಒಳ್ಳೆದಕ್ಕೆ ಬಿಟ್ಟು ಕೊಡುವುದು ಒಳ್ಳೆ ದಾರಿ ಎಂದರು. ಬಳಿಕ ಶಿವಮೊಗ್ಗ ಡಿ ಸಿ ಕಚೇರಿ ಮೇಲೆ ಆಜಾನ್ ಕೂಗಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದರಿಂದ ಅವರ ಮಾನಸಿಕತೆ ಗೊತ್ತಾಗುತ್ತೆ. ವಿಧಾನಸೌಧದ ಮೇಲೆ ಕೂಗುತ್ತೇವೆ ಎಂಬ ದಾಸ್ಯ ಜಿನ್ನಾ, ಬಿನ್ ಲಾಡೆನ್ ಮಾನಸಿಕತೆಗಿಂತ ಭಿನ್ನವಾಗಿಲ್ಲ. ಆ ಮಾನಸಿಕತೆಯನ್ನು ಹೇಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದು ಸಿ ಟಿ ರವಿ ಗುಡುಗಿದರು.
ಇದನ್ನು ಓದಿ:ಉರಿಗೌಡ ನಂಜೇಗೌಡ ಉಲ್ಲೇಖಿತ ಸುವರ್ಣ ಮಂಡ್ಯ ಪುಸ್ತಕ ಮರುಮುದ್ರಿಸಿ, ಜನತೆಗೆ ಹಂಚಿಕೆ : ಶೋಭಾ ಕರಂದ್ಲಾಜೆ