ಚಿಕ್ಕಮಗಳೂರು:ಜಿಲ್ಲೆಯ ಜನರಿಗೆ ತಗುಲಿದ್ದ ಕೊರೊನಾ ಮಹಾಮಾರಿ ಕೊನೆಗೂ ದೂರವಾಗಿದ್ದು, ಚಿಕ್ಕಮಗಳೂರಿನ ಜನತೆಗೆ ಬಿಗ್ ರಿಲೀಫ್ ನೀಡಿದಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದವರೆಲ್ಲರೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಜಿಲ್ಲೆಯಲ್ಲಿ ಒಟ್ಟು 18 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿದ್ದವು. ಇದರಲ್ಲಿ ಇಬ್ಬರಿಗೆ ಲ್ಯಾಬ್ ತಪ್ಪು ಮಾಹಿತಿ ನೀಡಿದ ಕಾರಣ ಆ ಎರಡು ಪ್ರಕರಣ ಫಾಲ್ಸ್ ಎಂದು ಪರಿಗಣಿಸಿ ಕೂಡಲೇ ಇಬ್ಬರನ್ನು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಇನ್ನುಳಿದ 16 ಮಂದಿ ಪೈಕಿ ಮುಂಬೈನಿಂದ ಬಂದ 15 ಹಾಗೂ ದೆಹಲಿಯಿಂದ ಆಗಮಿಸಿದ್ದ ಓರ್ವ ವ್ಯಕ್ತಿಯಲ್ಲಿ ಕೊರೊನಾ ಕಾಣಿಸಿಕೊಂಡಿತ್ತು.
ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ನಿನ್ನೆಯವರೆಗೆ ಈ ಪೈಕಿ 14 ಮಂದಿ ಡಿಸ್ಚಾರ್ಜ್ ಆಗಿದ್ದು, ಇಂದು ಇಬ್ಬರು ಕೊರೊನಾ ವೈರಸ್ನಿಂದ ಗುಣಮುಖರಾದ ಹಿನ್ನೆಲೆ ಎಲ್ಲರನ್ನು ಬಿಡುಗಡೆ ಮಾಡಲಾಗಿದೆ. 16 ಮಂದಿಯೂ ಜಿಲ್ಲೆಯಲ್ಲಿ ಕೊರೊನಾ ವೈರಸ್ನಿಂದ ಗುಣಮುಖರಾಗಿದ್ದಾರೆ.
ಚಿಕ್ಕಮಗಳೂರಿನ ಕೋವಿಡ್ ಅಸ್ಪತ್ರೆಯಿಂದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ವೈರಸ್ ಯಾವುದೇ ಪ್ರಕರಣಗಳು ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಹೆಚ್ಚಾಗಿ ಇರುವುದರಿಂದ ಜನರು ಜಾಗೃತರಾಗಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜನರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.