ಚಿಕ್ಕಮಗಳೂರು:ಇಂದಿನಿಂದ ಕಾಫಿನಾಡಿನಲ್ಲಿ ಚಿಕ್ಕಮಗಳೂರು ಹಬ್ಬ ಆರಂಭಗೊಳ್ಳಲಿದ್ದು, ಈ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಆಗಮಿಸಿದ್ದಾರೆ. ಇಂದು ಸಂಜೆ ಆರಂಭಗೊಳ್ಳಲಿರುವ ಚಿಕ್ಕಮಗಳೂರು ಹಬ್ಬಕ್ಕೆ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ, ಬೀರೂರಿಗೆ ಬಂದಿಳಿದ ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕ ಬೆಳ್ಳಿ ಪ್ರಕಾಶ್ ಅವರ ಮಗಳ ಮದುವೆಯಲ್ಲಿ ಭಾಗಿಯಾದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, ಶಾಸಕ ಬೆಳ್ಳಿ ಪ್ರಕಾಶ್ ಅವರ ಮಗಳ ಮದುವೆ ಮುಗಿಸಿಕೊಂಡು ಇಂದು ಸಂಜೆ ನಡೆಯಲಿರು ಚಿಕ್ಕಮಗಳೂರು ಉತ್ಸವದಲ್ಲಿ ಭಾಗಿಯಾಗಲಿರುವುದಾಗಿ ತಿಳಿಸಿದರು. ನಾಲ್ಕು ವರ್ಷಗಳ ಬಳಿಕ ಉತ್ಸವ ಜರುಗುತ್ತಿದ್ದು, ಇದಕ್ಕೆ ಉತ್ಸಾಹ ತುಂಬುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಅಲ್ಲದೇ ಶಾಸಕ ಸಿಟಿ ರವಿ ಅವರು ಉತ್ಸವಕ್ಕೆ ಆಸಕ್ತಿ ತೋರಿಸಿದ್ದಾರೆ ಎಂದರು.
ವಿಧಾನ ಪರಿಷತ್ನ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪಕ್ಷದ ತೊರೆದ ಶಾಕರನ್ನು ವೇಶ್ಯೆಗೆ ಹೋಲಿಕೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿ.ಕೆ ಹರಿಪ್ರಸಾದ್ ಏಕೆ ಹಾಗೇ ಹೇಳಿದರು ಅಂತ ಗೊತ್ತಿಲ್ಲ, ಅವರು ಸ್ವಲ್ಪ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ಈ ಹಿಂದೆ 2007ರಲ್ಲಿ ಅವರ ಪಕ್ಷದ ಈಗಿನ ನಾಯಕರು ಜೆಡಿಎಸ್ಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ಗೆ ಬಂದು ಸೇರಿಕೊಂಡಿದ್ದರು. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಕೊಂಡವರಿಗೂ ಬಿಕೆ ಹರಿಪ್ರಸಾದ್ ಅವರ ಮಾತು ಅನ್ವಯಿಸುತ್ತಾ? ಹೇಳಿಕೆಗಳನ್ನು ನೀಡುವಾಗ ಯೋಚನೆ ಮಾಡಿ ಮಾತನಾಡಬೇಕು ಎಂದು ಹೇಳಿದರು.
ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಬಿ.ಸಿ ಪಾಟೀಲ್ ಪ್ರತಿಕ್ರಿಯೆ: ಇದೇ ವಿಚಾರಕ್ಕೆ ಸಚಿವ ಬಿ.ಸಿ.ಪಾಟೀಲ್ ಅವರು ಹಾವೇರಿಯಲ್ಲಿ ಪ್ರತಿಕ್ರಿಯೆ ನೀಡಿ, ’’ಹರಿಪ್ರಸಾದ್ ಯಾವ ಚುನಾವಣೆಯಲ್ಲಿ ಗೆದ್ದಿದ್ದಾರೆ. ಎಲ್ಲಿ ಆಯ್ಕೆಯಾಗಿದ್ದಾರೆ. ಅವರು ಜನರಿಂದ ನೇರವಾಗಿ ಆಯ್ಕೆಯಾದವರಲ್ಲ. ಅವರು ಹಿಂದಿನ ಬಾಗಿಲಿನಿಂದ ಬಂದು ಶಾಸಕರಾಗಿದ್ದಾರೆ. ಈ ರೀತಿ ಹಿಂಬಾಗಿಲಿನಿಂದ ಬರುವವರಿಗೆ ಏನಂತ ಕರೆಯಬೇಕು?. ಬಹುಶಃ ಪಿಂಪ್ ಎಂದು ಕರೆಯಬಹುದಾ?. ಆದರೆ, ಆ ರೀತಿ ಕರೆಯಲು ಆಗುವುದಿಲ್ಲ. ಇದು ಅವರ ಸಂಸ್ಕೃತಿ. ನಮ್ಮ ಸಂಸ್ಕೃತಿ ಬೇರೆ ಎಂದರು. ಬಿ.ಕೆ ಹರಿಪ್ರಸಾದ್ ತಮ್ಮ ಸ್ಥಾನ, ಘನತೆಗೆ ತಕ್ಕಂತೆ ಗೌರವದಿಂದ ಮಾತನಾಡಿದರೆ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಜನ ಅವರನ್ನು ಬೆನ್ನತ್ತಿ ಹೊಡೆಯುತ್ತಾರೆ’’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.