ಚಿಕ್ಕಮಗಳೂರು: ತೀರಾ ಹದಗೆಟ್ಟ ವಾತಾವರಣದಿಂದ ಅಡಿಕೆಯನ್ನ ಒಣಗಿಸಲು ಜಾಗವಿಲ್ಲದೆ ಮಲೆನಾಡಿಗರು ಮಂಚದ ಕೆಳಗೆ ಬೆಂಕಿ ಹಾಕಿ ಮಂಚದ ಮೇಲೆ ಅಡಿಕೆ ಒಣಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ವೃದ್ಧ ಗಜೇಂದ್ರ ಹೆಬ್ಬಾರ್ ಪ್ರಕೃತಿ ಎದುರು ಅಸಹಾಯಕರಾಗಿ ಮನೆಯಲ್ಲಿ ಮಲಗುವ ಮಂಚದ ಮೇಲೆ ಅಡಿಕೆ ಒಣಗಿಸುತ್ತಿದ್ದಾರೆ. ಮಲೆನಾಡಲ್ಲಿ ಕಳೆದ ಒಂದೆರಡು ತಿಂಗಳಿಂದಲೂ ಒಂದೆರಡು ದಿನ ಬಿಡುವ ನೀಡುವ ವರುಣದೇವ ಮತ್ತೆ ಧಾರಾಕಾರವಾಗಿ ಸುರಿಯುತ್ತಿದ್ದಾನೆ. ಆಗಾಗ ಮಳೆ, ಬಿಸಿಲು, ಮೋಡದ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ಮಲೆನಾಡಿಗರು ಕೊಯ್ದಿರುವ ಕಾಫಿಯನ್ನ ಒಣಗಿಸಲು ಜಾಗವಿಲ್ಲದೆ ಪರದಾಡುವಂತಾಗಿದೆ.
ಅಡಿಕೆ, ಕಾಫಿ ಮಲೆನಾಡಿಗರ ಜೀವ. ಸಣ್ಣ-ಸಣ್ಣ ಹಿಡುವಳಿ ಮೂಲಕ ಬದುಕು ಕಟ್ಟಿಕೊಂಡಿವರೇ ಹೆಚ್ಚು. ಆದರೆ, ಈಗ ಹವಾಮಾನದ ವೈಪರಿತ್ಯದಿಂದ ಮಲೆನಾಡಿಗರು ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಪ್ರಕೃತಿ ವಿರುದ್ಧ ಹೋರಾಡಲು ಶಕ್ತಿ ಇಲ್ಲದ ಮನುಷ್ಯರು ಸಿಕ್ಕ-ಸಿಕ್ಕ ದಾರಿಯಲ್ಲಿ ಬೆಳೆಗಳನ್ನ ಉಳಿಸಿಕೊಂಡು ವರ್ಷದ ಬದುಕು ದೂಡಲು ಮುಂದಾಗಿದ್ದಾರೆ.