ಚಿಕ್ಕಮಗಳೂರು :ಕೊರೊನಾ, ಕಾಡುಪ್ರಾಣಿಗಳ ದಾಳಿ ಹಾಗೂ ಅಕಾಲಿಕ ಮಳೆಯಿಂದ ತೀವ್ರ ನಷ್ಟಕ್ಕೆ ಸಿಲುಕಿರುವ ಕಾಫಿ ಬೆಳೆಗಾರರು ಫೆಬ್ರುವರಿ 1ರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ನಲ್ಲಿ ತಮಗೆ ಹಲವು ಪ್ಯಾಕೇಜ್ಗಳು ಘೋಷಣೆಯಾಗಲಿವೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬೆಳೆಗಾರರ ನಿರೀಕ್ಷೆಗಳು ಪ್ರತಿವರ್ಷವೂ ನಿರಾಸೆಯಾಗುತ್ತಿದ್ದು, ಈ ಬಾರಿಯಾದ್ರೂ ಈಡೇರುವ ಭರವಸೆ ಹೊಂದಿದ್ದಾರೆ.
ಚಿಕ್ಕಮಗಳೂರು ಪ್ರವಾಸಿರ ಸ್ವರ್ಗ. ನಿತ್ಯ ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಈ ಜಿಲ್ಲೆಯಲ್ಲಿ ಕಾಫಿ, ಅಡಿಕೆ, ಮೆಣಸು ಬೆಳೆಯನ್ನು ಅಧಿಕವಾಗಿ ಬೆಳೆಯಲಾಗುತ್ತದೆ. ಹೀಗಾಗಿ, ಕಾಫಿನಾಡು ಎಂದೇ ಪ್ರಖ್ಯಾತಿ ಪಡೆದಿದೆ. ಹೊರಗಿನವರಿಂದ ಚಿಕ್ಕಮಗಳೂರು ಅಭಿವೃದ್ಧಿ ಹೊಂದಿದ ಜಿಲ್ಲೆ ಎಂದು ಕರೆಸಿಕೊಂಡರೂ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಕೇಂದ್ರ ಸರ್ಕಾರ ಮಂಡಿಸುತ್ತಿರುವ ಈ ಆಯವ್ಯಯದಲ್ಲಿ ಕೆಲ ಯೋಜನೆಗಳು ಜಾರಿಯಾಗಲೇಬೇಕು ಎಂದೂ ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ...ಸಂಸದೆ ಕರಂದ್ಲಾಜೆ ಅತಿಥಿಯಂತೆ ಬರ್ತಾರಷ್ಟೇ.. ಚಿಕ್ಕಮಗಳೂರು-ಬೇಲೂರು - ಹಾಸನ ರೈಲ್ವೆ ಯೋಜನೆ ಏನಾಯ್ತು..?
ಕಳೆದ 15 ವರ್ಷಗಳಿಂದ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಎಕರೆಗೆ 20 ಮೂಟೆ ಬೆಳೆಯುತ್ತಿದ್ದ ಅರೆಬಿಕಾ ಕಾಫಿ, ಈಗ 2 ಮೂಟೆಗೆ ಇಳಿದಿದೆ. ಕಾರ್ಮಿಕರ ಸಮಸ್ಯೆಯೂ ಎದುರಾಗಿದೆ. ಅದಕ್ಕೆ ಅವರ ವೇತನ ಹೆಚ್ಚಾಗಿದ್ದೇ ಕಾರಣ. ಆದರೆ, ವಾಣಿಜ್ಯ ಬೆಳೆ ಕಾಫಿ ಬೆಲೆಯಲ್ಲಿ ಮಾತ್ರ ಇಳಿಕೆ ಕಾಣುತ್ತಿದೆ. ಅದಲ್ಲದೆ, ಈಗ ಕಾಫಿ ಮಂಡಳಿಯನ್ನು ವಿಸರ್ಜಿಸುವ (ಕೈ ಬಿಡುವ) ಮಾಡುವ ಹುನ್ನಾರ ನಡೆಯುತ್ತಿದೆ.
ಈಗಾಗಲೇ ನೂರಾರು ಸಮಸ್ಯೆಗಳಿಂದ ಕಾಫಿ ಬೆಳೆಗಾರರು ಅನಾಥರಾಗಿದ್ದು, ಅದನ್ನೂ ಕಳೆದುಕೊಂಡರೆ ಸಂಪೂರ್ಣ ಬೀದಿ ಪಾಲಾಗುತ್ತಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಬೇಡಿಕೆಗಳ ಪಟ್ಟಿ ಮತ್ತು ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸುವ ಪ್ರಯತ್ನ ಮಾಡಿಲ್ಲ ಎಂದು ಬೆಳೆಗಾರರು ಕಿಡಿಕಾರಿದ್ದಾರೆ.
ಕೇಂದ್ರ ಬಜೆಟ್ ಮೇಲೆ ಕಾಫಿ ಬೆಳೆಗಾರರ ಕಣ್ಣು ಕಾಫಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಕೇರಳದಲ್ಲಿ ಈ ಕಾಫಿ ಬೆಳೆಗೆ ಬೆಂಬಲ ಘೋಷಿಸಿ ಬೆಳೆಗಾರರ ಮನಗೆದ್ದಿದೆ. ಕೇರಳ ಹಣಕಾಸು ಸಚಿವ ಟಿ.ಎಂ.ಥಾಮಸ್ ಐಸಾಕ್ ಅವರು ಜನವರಿ 17ರಂದು ತಮ್ಮ ಬಜೆಟ್ ಭಾಷಣದಲ್ಲಿ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗಲಿದೆ. ಈ ಬಗ್ಗೆ ಕೇಂದ್ರ ಯೋಚಿಸಬೇಕಿದೆ. ಆದರೆ, ನಮ್ಮಲ್ಲಿ ಮಾತ್ರ ಸುಮಾರು ವರ್ಷಗಳಿಂದ ಇದ್ದ ಬೆಲೆಯೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ...ಮಲೆಯ ಮಾರುತದಲ್ಲಿರುವ ಕಟ್ಟಡಕ್ಕೆ ಬೇಕಿದೆ ಅಭಿವೃದ್ಧಿ ಕಾರ್ಯ
ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಕೈಗಾರಿಕಾ ಪ್ರದೇಶವಿಲ್ಲ. ಪ್ರಮುಖವಾಗಿ ಗಾರ್ಮೆಂಟ್ಸ್ ಮತ್ತು ಜವಳಿ ಕೈಗಾರಿಕೆ, ಮೆಣಸು ಮುಕ್ತ ಮಾರುಕಟ್ಟೆ ಪ್ರಾರಂಭವಾಗಬೇಕು. ಈಗಾಗಲೇ ಶಂಕುಸ್ಥಾಪನೆ ಆಗಿರುವ ಮಿನಿವಿಮಾನ ನಿಲ್ದಾಣವನ್ನೂ ಪೂರ್ಣಗೊಳಿಸಬೇಕು. ಅಡಿಕೆ ಬೆಳೆಗೆ ಬೆಂಬಲ ಬೆಲೆ ಸೂಚಿಸಬೇಕು. ಅಡಿಕೆಗೆ ಬರುವ ಹಳದಿ ಎಲೆ ರೋಗ ಮತ್ತು ಕೊಳೆ ರೋಗದ ತಡೆಗೆ ಶಾಶ್ವತ ಪರಿಹಾರ ಹುಡುಕಬೇಕಿದೆ. ಮೆಣಸು ಬೆಳೆಗೆ ಇಲ್ಲಿಯೇ ಮುಕ್ತ ಮಾರುಕಟ್ಟೆಯನ್ನು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಿಯಾದ ತೀರ್ಮಾನ ಕೈಗೊಳ್ಳಬೇಕು. ಅದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಹೀಗೆ ಹತ್ತು ಹಲವು ಬೇಡಿಕೆಗಳನ್ನು ಕಾಫಿನಾಡಿನ ಜನತೆ ಆಗ್ರಹಿಸಿದ್ದು, ಬಜೆಟ್ನಲ್ಲಿ ಏನೆಲ್ಲಾ ಸಿಗಲಿದೆ ಎಂಬುದನ್ನು ಫೆಬ್ರುವರಿ 1ರ ತನಕ ಕಾದು ನೋಡಬೇಕಿದೆ.