ಚಿಕ್ಕಮಗಳೂರು :ಎನ್ಆರ್ ಪುರ ತಾಲೂಕಿನ ಕರಗುಂದ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬಜರಂಗದಳ ಕಾರ್ಯಕರ್ತರನ್ನ ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ಉಮಾಮಹೇಶ್ವರಿ ದೇವಸ್ಥಾನದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಬಜರಂಗದಳ ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೊಲೀಸರು.. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕರುಗುಂದ ಗ್ರಾಮದ ಸರ್ಕಾರಿ ಜಾಗದಲ್ಲಿರುವ ಅಕ್ರಮ ಶಿಲುಬೆ ತೆರವುಗೊಳಿಸುವಂತೆ ಬಜರಂಗದಳದ ಹಮ್ಮಿಕೊಂಡಿದ್ದ ಕರಗುಂದ ಚಲೋ ಪ್ರತಿಭಟನೆಯನ್ನ ಪೊಲೀಸರು ತಡೆದಿದ್ದಾರೆ. ಅಷ್ಟೇ ಅಲ್ಲ, ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಎನ್.ಆರ್ ಪುರದ ಉಮಾಮಹೇಶ್ವರಿ ದೇವಸ್ಥಾನದ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಬಜರಂಗದಳ ಪ್ರಾಂತ್ಯ ಸಂಚಾಲಕ ಸಕಲೇಶಪುರ ರಘು, ಆರ್.ಡಿ ಮಹೇಂದ್ರ, ಶಶಾಂತ್, ಪುರುಷೋತ್ತಮ್ ಮುಂತಾದ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಎನ್ಆರ್ ಪುರಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಎನ್ಆರ್ ಪುರ ಪೊಲೀಸರು ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಕಟ್ಟೆಚ್ಚರವಹಿಸಿದ್ದಾರೆ.