ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಹೇಳಿಕೆ ಚಿಕ್ಕಮಗಳೂರು: ತಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹತಾಶೆಗೊಂಡು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಂಜುನಾಥ್ ಎಂಬವರು ಡಿ.ಸಿ ಕಚೇರಿಯ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಮನವಿ ಸಲ್ಲಿಸಿರುವ ವಿಚಿತ್ರ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ನಡೆಯಿತು. ಕಂದಾಯ ಇಲಾಖೆಯ ಪಹಣಿ ತಿದ್ದುಪಡಿಗೆ ಇವರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿರುವ ಮಂಜುನಾಥ್, ಗಾಂಧಿ ಪ್ರತಿಮೆಗೆ ಮನವಿ ಪತ್ರ ಸಲ್ಲಿಸಿ ನಮಸ್ಕರಿಸಿದರು.
ಪ್ರತಿಮೆ ಬಳಿ ತೆರಳಲು ಮಂಜುನಾಥ್‌ಗೆ ಪೊಲೀಸರು ಅವಕಾಶ ಕೊಡದ ಕಾರಣ ಕೆಲಕಾಲ ಹೈಡ್ರಾಮ ನಡೆಯಿತು. ಅಂತಿಮವಾಗಿ, ಪ್ರತಿಮೆ ಬಳಿ ನಿಂತು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲು ಅನುವು ಮಾಡಿಕೊಡಲಾಯಿತು.
ಮಂಜುನಾಥ್ ಪ್ರತಿಕ್ರಿಯಿಸಿ, "ಪಹಣಿ ದೋಷಮುಕ್ತ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಸೂಚನೆ ನೀಡಿದರೂ ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ನಡೆಸುತ್ತಿರುವ ಜನತಾ ದರ್ಶನ ಕಾರ್ಯಕ್ರಮ ವಿಫಲವಾಗಿದೆ ಎಂದು ದೂರಿದರು.
ಪ್ರತಿಭಟನೆಯ ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರು ಮಂಜುನಾಥ್ ಅವರಿಂದ ಮನವಿ ಸ್ವೀಕರಿಸಿದರು. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಗಡುವಿನೊಳಗೆ ಈ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ವಿಭಿನ್ನ ರೀತಿಯ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ರೈತ ಮುಖಂಡ ನೀಡಿದ್ದಾರೆ.
ಇದನ್ನೂ ಓದಿ:ಹೈಕೋರ್ಟ್ ಕಟ್ಟಡ ವಿಸ್ತರಣೆ: ಮುಖ್ಯ ನ್ಯಾಯಮೂರ್ತಿಗಳ ಮುಂದೆ ಪ್ರಸ್ತಾವ ಇಡಲು ಸೂಚನೆ