ಚಿಕ್ಕಮಗಳೂರು:ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜನರಿಂದ 2,000 ಮುಖಬೆಲೆಯ ನೋಟುಗಳ ಹಿಂಪಡೆಯುವಿಕೆಗೆ ಗಡುವು ನೀಡಿದೆ. ಮುಂದಿನ 4-5 ತಿಂಗಳಲ್ಲಿ ಈ ನೋಟಿನ ಮೂಲಕ ನಡೆಯುವ ವಹಿವಾಟು ಕೊನೆಯಾಗಲಿದೆ. ಆದರೆ, ಜಿಲ್ಲೆಯ ಕಳಸ ತಾಲೂಕಿನ ತೇಜು ಎಂಬ ಯುವಕನ ಬದುಕಲ್ಲಿ ಎಷ್ಟೇ ವರ್ಷಗಳು ಕಳೆದರೂ 2,000 ರುಪಾಯಿ ಮುಖಬೆಲೆಯ ನೋಟು ಹಚ್ಚ ಹಸಿರಾಗಿಯೇ ಇರಲಿದೆ.
ಈ ಯುವಕ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನಕ್ಕಾಗಿ 2019 ರಲ್ಲಿ ನಡೆದ ತನ್ನ ಮದುವೆಯ ಆಮಂತ್ರಣ ಪತ್ರಿಕೆಯ ಫ್ರೆಂಡ್ಸ್ ಕಾರ್ಡ್ ಅನ್ನು ಇದೇ ನೋಟಿನ ಮಾದರಿಯಲ್ಲಿ ಮುದ್ರಣ ಹಾಕಿಸಿದ್ದ. ಆಮಂತ್ರಣ ಪತ್ರಿಕೆಯನ್ನು ನೋಡಿದರೆ 2 ಸಾವಿರ ರುಪಾಯಿ ನೋಟು ನೋಡಿದ ಅನುಭವವೇ ಆಗುವಂತಿತ್ತು.
ನೋಟಿನಲ್ಲಿರುವ ನಂಬರ್, ನೋಟಿನ ಮಧ್ಯ ಭಾಗದಲ್ಲಿ ಇರುವ ಎಲ್ಲ ಭಾಷೆಯಲ್ಲಿಯೂ ಎರಡು ಸಾವಿರ ರುಪಾಯಿ ಎಂದು ಇರುವ ಜಾಗದಲ್ಲಿ ತನ್ನ ಹೆಸರಿನ ಜೊತೆ ಮದುವೆಯಾಗುವ ಹುಡುಗಿಯ ಹೆಸರನ್ನು ಪ್ರಿಂಟ್ ಹಾಕಿಸಿದ್ದ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಇರುವ ಜಾಗದಲ್ಲಿ ಲವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದನು.
ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿ ಫೋಟೋ ಇರುವೆಡೆ ವಧು-ವರರನ್ನು ಆಶೀರ್ವದಿಸುತ್ತಿರುವ ಗಣಪತಿಯ ಭಾವಚಿತ್ರವಿದೆ. ನೋಟಿನ ಮತ್ತೊಂದು ಬದಿಯಲ್ಲಿ ಸ್ಕ್ಯಾನರ್ ಇದ್ದು, ಅದನ್ನು ಸ್ಕ್ಯಾನ್ ಮಾಡಿದರೆ ಕಳಸ ತಾಲೂಕಿನ ಮದುವೆ ಮಂಟಪಕ್ಕೆ ಬರುವ ಮಾರ್ಗ ತೋರಿಸುವಂತಿದೆ. ಸುಮಾರು 1,500 ಕಾರ್ಡ್ ಮಾಡಿಸಿದ್ದ ಯುವಕ ಸ್ನೇಹಿತರಿಗೆಲ್ಲ ಹಂಚಿದ್ದ.
ಇದೀಗ ಈ ಮುಖಬೆಲೆಯ ನೋಟನ್ನು ಆರ್‌ಬಿಐ ಹಿಂಪಡೆಯುತ್ತಿದ್ದಂತೆ ಯುವಕ ತೇಜು ಸ್ನೇಹಿತರು ಆ ನೋಟಿನ ಇನ್ವಿಟೇಷನ್ ಕಾರ್ಡ್ ಕಳುಹಿಸಿ ನೆನಪಿಸುತ್ತಿದ್ದಾರೆ. ಕಾರ್ಡ ಅನ್ನು ಅಚ್ಚುಕಟ್ಟಾಗಿ ಪ್ರಿಂಟ್ ಹಾಕಿಕೊಡಲು ಉಡುಪಿಯ ಆಪ್‍ಸೆಟ್ ಪ್ರಿಂಟರ್ಸ್‌ನವರು ವಾರಗಟ್ಟಲೆ ಸಮಯ ತೆಗೆದುಕೊಂಡಿದ್ದರಂತೆ. ಇನ್ನು ಮುಂದೆ ಇದು ನೆನಪಷ್ಟೇ. ಪ್ರಧಾನಿ ಮೇಲಿನ ಅಭಿಮಾನಕ್ಕಾಗಿ ವಿಶೇಷವಾಗಿ ಮದುವೆ ಆಮಂತ್ರಣ ಕಾರ್ಡ್ ಮಾಡಿಸಬೇಕೆಂದು ಕಾರ್ಡ್ ಮಾಡಿಸಿದ್ದ ಕಳಸ ತಾಲೂಕಿನ ಯುವಕನ ಬಾಳಲ್ಲಿ ಈ ರೂಪಾಯಿ ನೋಟು ಎಂದೆಂದೂ ಹಚ್ಚ ಹಸಿರಾಗಿರಲಿದೆ.
ಮತದಾನಕ್ಕೆ ಮದುವೆ ಮಾದರಿಯ ಆಮಂತ್ರಣ ಪತ್ರಿಕೆ:ಮೇ 10 ಕ್ಕೆ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿತ್ತು. ಈ ಮತದಾನದಲ್ಲಿ ಎಲ್ಲ ನಾಗರಿಕರು ತಪ್ಪದೆ ಮತ ಚಲಾಯಿಸಬೇಕೆಂಬ ಉದ್ದೇಶದಿಂದ ಮೈಸೂರಿನಲ್ಲಿ ಮತದಾನಕ್ಕೆ ಮದುವೆ ಮಾದರಿಯ ಆಮಂತ್ರಣ ಪತ್ರಿಕೆಯನ್ನು ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ನೀಡಿದ್ದರು.
ಭಾರತ ಸರ್ಕಾರದ ಹೆಸರಿನಲ್ಲಿ ಚುನಾವಣೆ ಆಯೋಗದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ, ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ 1945 ಸರಿಯಾದ ಶ್ರೀಶೋಭಕೃತ್ ನಾಮಸಂವತ್ಸರ ದಿನಾಂಕ 10.5.2023 ರ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಲ್ಲುವ ಶುಭಗಳಿಗೆಯಲ್ಲಿ ಮತದಾನ ಚುನಾವಣೆಯೋತ್ಸವ ನೆರವೇರುವಂತೆ ಭಾರತ ಸರ್ಕಾರ ನಿಶ್ಚಯಿಸಿರುವುದರಿಂದ, ತಾವು ಸಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಸ್ವಯಿಚ್ಛೆಯಂತೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯ ರೂಪಿಸಬೇಕು ಎಂದು ಕೋರುವ ತಮ್ಮ ಆಗಮನಾಭಿಲಾಷಿಗಳು ಭಾರತ ಚುನಾವಣೆ ಆಯೋಗ. ಸ್ಥಳ ತಮ್ಮ ತಮ್ಮ ಮತಗಟ್ಟೆ ಕೇಂದ್ರ ಎಂದು ಕೋರಲಾಗಿದೆ ಎಂದು ಮುದ್ರಿಸಿ ಹಂಚಿದ್ದರು.
ಇದನ್ನೂ ಓದಿ:2 ಸಾವಿರ ರೂಪಾಯಿ ನೋಟುಗಳೊಂದಿಗೆ 4 ಲಕ್ಷ ರೂ. ತೆರಿಗೆ ಪಾವತಿಸಿದ ಬಸ್ ನಿರ್ವಾಹಕರು