ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ ಪ್ರಸ್ತಾವನೆ ಸಲ್ಲಿಕೆ: ಡಿ. ಎಸ್. ಅರುಣ್ - Arya vaishya Community Development Corporation
ಸರ್ಕಾರಕ್ಕೆ 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಶೇ.50 ರಷ್ಟು ಅನುದಾನ ಕಡಿತಗೊಳಿಸಿ 5 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆ ಮಾಡಿದೆ ಎಂದು ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ. ಎಸ್. ಅರುಣ್ ತಿಳಿಸಿದರು.
ಚಿಕ್ಕಮಗಳೂರು: ಆರ್ಯ ವೈಶ್ಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮಕ್ಕೆ ಸರ್ಕಾರದಿಂದ 15 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ. ಎಸ್. ಅರುಣ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದರು. ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿಗೆ ಸರ್ಕಾರವು ಬದ್ಧವಾಗಿದ್ದು, ಅರಿವು ಶೈಕ್ಷಣಿಕ ಸಾಲ ಯೋಜನೆ ಹಾಗೂ ಸ್ವ-ಉದ್ಯೋಗ ಯೋಜನೆ ಅಡಿಯಲ್ಲಿ ನೇರ ಸಾಲ ನೀಡಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಸಾಲಸೌಲಭ್ಯ ನೀಡಲಾಗುತ್ತಿದೆ. ಗರಿಷ್ಠ 1 ಲಕ್ಷದಂತೆ ಶೇ.2 ರ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರಕ್ಕೆ 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. 2019-20 ನೇ ಸಾಲಿಗೆ 10 ಕೋಟಿ ರೂ ಬಿಡುಗಡೆಗೊಳಿಸಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಶೇ.50 ರಷ್ಟು ಅನುದಾನ ಕಡಿತಗೊಳಿಸಿ 5 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆ ಮಾಡಿದೆ. ಅದರ ಸೌಲಭ್ಯವನ್ನು ಸಮುದಾಯ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.
ಲಾಕ್‌ಡೌನ್ ನಿಂದಾಗಿ ಬೀದಿ ಬದಿ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ ಉಂಟಾಗಿದೆ. ಹಾಗಾಗಿ ಸರ್ಕಾರದ ವಿವಿಧ ಯೋಜನೆಗಳಿಂದ ಸಾಲಸೌಲಭ್ಯ ಒದಗಿಸಲಾಗುತ್ತಿದೆ. 3 ಲಕ್ಷ ರೂ. ಆದಾಯ ಮಿತಿ ಹೊಂದಿದ 18 ರಿಂದ 45 ವರ್ಷ ವಯೋಮಿತಿಯ ಅರ್ಜಿದಾರರಿಗೆ ಸಾಲ ಒದಗಿಸಲಾಗುತ್ತಿದೆ ಎಂದು ಹೇಳಿದರು.