ಚಿಕ್ಕಬಳ್ಳಾಪುರ:ಕುಟುಂಬಸ್ಥರು ಒಡಹುಟ್ಟಿದ ಅಕ್ಕ-ತಂಗಿಯರಿಬ್ಬರಿಗೂ ಬೇರೆ ಬೇರೆ ಕಡೆ ವಿವಾಹ ಮಾಡಿಕೊಟ್ಟಿದ್ರು. ಇಬ್ಬರಿಗೂ ಕುಡುಕ ಗಂಡಂದಿರೇ ಸಿಕ್ಕಿದ್ದರು. ಕುಡುಕ ಗಂಡಂದಿರ ಕಾಟ ತಾಳಲಾರದೇ ಒಂದು ವಾರದ ಅಂತರದಲ್ಲಿ ಇಬ್ಬರು ತವರು ಮನೆ ಸೇರಿದ್ದರು. ಈ ವೇಳೆ ಅಕ್ಕನ ವಿವಾಹೇತರ ಸಂಬಂಧಕ್ಕೆ ಅಡ್ಡಪಡಿಸಿದ ತಂಗಿಯ ಮಗುವನ್ನೇ ಕೊಂದು ಹೂತು ಹಾಕಿರುವ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ.
ಅಂಬಿಕಾ ಹಾಗೂ ಅನಿತಾ ಅಕ್ಕ ತಂಗಿಯಾಗಿದ್ದು, ಅಂಬಿಕಾಳನ್ನು ಮಾವಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇನ್ನು ಅನಿತಾಳನ್ನ ಶಿಡ್ಲಘಟ್ಟದ ಬುಡಗವಾರಹಳ್ಳಿ ಗ್ರಾಮದ ವಿಶ್ವನಾಥ್ ಎಂಬವರ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಅನಿತಾ ಹಲವು ವರ್ಷಗಳ ಹಿಂದೆ ಗಂಡ ಮದ್ಯವ್ಯಸನಿ ಎಂದು ಗಂಡನನ್ನು ತೊರೆದು ಬಂದು ತವರು ಮನೆಯಲ್ಲಿ ವಾಸವಾಗಿದ್ದಳು. ಅಂಬಿಕಾ ಸಹ ಒಂದು ವಾರದ ಹಿಂದೆ ಪತಿಯನ್ನು ತೊರೆದು ತವರು ಸೇರಿದ್ದಳು. ಅಲ್ಲದೇ ರಾತ್ರಿ ಯಾವ್ ಯಾವುದೋ ಸಮಯಕ್ಕೆ ಮನೆಗೆ ಬರುತ್ತಿದ್ದಳು. ಇದರಿಂದ ವಿವಾಹೇತರ ಸಂಬಂಧದ ಶಂಕೆ ಮೂಡಿದ್ದು, ಅಂಬಿಕಾಳಿಗೆ ಅನಿತಾ ಬೈದಿದ್ದಳು. ಇದೇ ಕಾರಣಕ್ಕೆ ಮಗುವನ್ನು ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಅಂಬಿಕಾ ತನ್ನ ತಂಗಿ ಅನಿತಾಳ ಮಕ್ಕಳಾದ ಮಗ ಹಾಗೂ ಮಗಳನ್ನು ಗುರುವಾರ ಬೆಳಗ್ಗೆ ಮನೆಯಿಂದ ಕರೆದುಕೊಂಡು ಹೋಗಿದ್ದಳು. ಬಳಿಕ ಮಧುವನ್ನು ಗುಡಿಬಂಡೆ ಮಾರ್ಗದಲ್ಲಿರುವ ಎಂಎಲ್‍ಸಿ ಮುನಿರಾಜು ಅವರ ಸಹೋದರರಿಗೆ ಸೇರಿದೆ ಎನ್ನಲಾದ ಮಾವಿನ ತೋಟದಲ್ಲಿ ಗುದ್ದಲಿಯಿಂದ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಅಲ್ಲದೇ ಅಲ್ಲಿಯೇ ಮಣ್ಣಲ್ಲಿ ಹೂತು ಹಾಕಿದ್ದಾಳೆ. ಇದಾದ ನಂತರ ಹೆಣ್ಣು ಮಗುವನ್ನು ಕರೆದುಕೊಂಡು ಬೆಂಗಳೂರಿನ ಯಲಹಂಕಗೆ ತೆರಳಿದ್ದಾಳೆ. ಅಲ್ಲಿ ಅಕೆಯನ್ನು ಮಾರಾಟ ಮಾಡಲು ಮುಂದಾಗಿದ್ದಳು ಎಂದು ತಿಳಿದುಬಂದಿದೆ. ಅಂಬಿಕಾಳ ನಡವಳಿಕೆಯಿಂದ ಆಟೋ ಚಾಲಕನೊಬ್ಬ ಅನುಮಾನಗೊಂಡು ಆಕೆಯನ್ನು ಹಾಗೂ ಹೆಣ್ಣು ಮಗುವನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಪೊಲೀಸರ ಎದುರು ಆಕೆ ತನ್ನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾಳೆ.
ಕಬ್ಬನ್ ಪಾರ್ಕ್ ಪೊಲೀಸರು ಬಳಿಕ ಬಾಲಕಿಯ ತಾಯಿ ಹಾಗೂ ಪೇರೇಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ನಡೆಸಿದಾಗ ಬಾಲಕನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹೂತಾಕಿದ್ದ ಮೃತದೇಹವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು ಈ ವೇಳೆ ಮೃತ ಬಾಲಕನ ಪೋಷಕರ ರೋದನ ಮುಗಿಲು ಮುಟ್ಟಿತ್ತು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ:ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಹಿಂದುರುಗಿದ ದಂಪತಿ; ಐಪಿಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ