ಚಿಕ್ಕಬಳ್ಳಾಪುರ :ಇತಿಹಾಸ ಪ್ರಸಿದ್ದ ನಂದಿಯ ಭೋಗನಂದೀಶ್ವರ ದೇಗುಲದಲ್ಲಿ ಕಳ್ಳರು ಹುಂಡಿ ಕಳುವು ಮಾಡಿ ಹಣ ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಭೋಗನಂದೀಶ್ವರ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ತಾಲೂಕಿನ ನಂದಿ ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಭೋಗನಂದೀಶ್ವರ ದೇವಾಲಯದಲ್ಲಿ ಕಳ್ಳರು ಎರಡು ದಿನಗಳ ಹಿಂದೆ ರಾತ್ರಿ ದೇವಾಲಯದಲ್ಲಿರುವ ಹುಂಡಿ ಕಳ್ಳತನ ಮಾಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಾರ ಹುಂಡಿಯಲ್ಲಿ 18 ಸಾವಿರ ರೂ. ಇತ್ತಂತೆ.
ದೇಗುಲದಲ್ಲಿ ಕಳ್ಳರು ಈ ಹಿಂದೆ ಎರಡು ಬಾರಿ ಹುಂಡಿ ಮತ್ತು ದೇಗುಲದ ಗೋಪುರದಲ್ಲಿದ್ದ ಕಲ್ಲಿನ ಕಳಶಗಳನ್ನ ಕಳ್ಳತನ ಮಾಡಿದ್ದರು. ದೇವಾಲಯವು ಮುಜರಾಯಿ ಮತ್ತು ಪ್ರಾಚ್ಯ ಸಂಶೋಧನಾ ಇಲಾಖೆಗಳ ಅಧೀನದಲ್ಲಿದೆ.
ಈ ಹಿಂದೆ ಕಳ್ಳತನ ನಡೆದಾಗ ಹಿಂದಿನ ಜಿಲ್ಲಾಧಿಕಾರಿ ದೇವಾಲಯಕ್ಕೆ ಮಾಜಿ ಸೈನಿಕರೊಬ್ಬರನ್ನ ಕಾವಲಿಗೆ ನೇಮಿಸಿದ್ದರು. ಕೊರೊನಾ ಕಾರಣದಿಂದ ಕಳೆದೆರಡು ತಿಂಗಳ ಹಿಂದೆ ಅವರಿಗೆ ನೀಡುವ ಸಂಬಳ ಅಧಿಕ ಎಂದು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದು ಕಳ್ಳರಿಗೆ ವರವಾಗಿದೆ. ಕೂಡಲೇ ದೇವಾಲಯಕ್ಕೆ ಕಾವಲುಗಾರರನ್ನ ನೇಮಿಸಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.
ಓದಿ : ಶಾಲೆ-ಕಾಲೇಜುಗಳ ಸಮಯಕ್ಕೆ ಹೊಂದುವಂತೆ ಬಸ್ ವ್ಯವಸ್ಥೆ ಮಾಡಿ.. ಸಾರಿಗೆ ಸಚಿವರಿಗೆ ಶಿಕ್ಷಣ ಮಂತ್ರಿ ಪತ್ರ