ಚಿಕ್ಕಬಳ್ಳಾಪುರ: ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಜಿಲ್ಲಾದ್ಯಂತ ಕೆರೆ - ಕುಂಟೆ, ನದಿಗಳು ಉಕ್ಕಿ ಹರಿಯುತ್ತಿದೆ. ಹಲವು ಗ್ರಾಮಗಳಲ್ಲಿ ಜಲದಿಗ್ಬಂಧನವಾಗಿ, ಗ್ರಾಮಸ್ಥರಿಗೆ ದಿಕ್ಕು ತೋಚದಂತಾಗಿದೆ.
ಜಿಲ್ಲಾದ್ಯಂತ ರಾತ್ರಿ ಸುರಿದ ಭಾರಿ ಮಳೆ ಹಿನ್ನೆಲೆ ಕೆರೆ ಕಟ್ಟೆ ಹೊಡೆದ ಪರಿಣಾಮ ಡಾಂಬರ್ ರಸ್ತೆ ಸೇರಿದಂತೆ ರೈತರ ಬೆಳೆಗಳಿಗೆ ಹಾನಿಯಾಗಿದೆ. ಹಲವೆಡೆ ಅಧಿಕ ನೀರಿನ ಹರಿವಿನಿಂದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಜಿಲ್ಲೆಯ ಪಾಪದಿಮ್ಮನಹಳ್ಳಿ ಗ್ರಾಮದ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಗ್ರಾಮದ ಜನರಿಗೆ ಜಲದಿಗ್ಬಂಧನವಾಗಿದೆ. ಗ್ರಾಮದಿಂದ ಹೊರಗೆ ಅಥವಾ ಒಳಗೆ ಹೋಗುವ ಅವಕಾಶವೇ ಇಲ್ಲದಂತಾಗಿದೆ. ಈಗಾಗಲೇ ಎಲ್ಲೋ ಅಲರ್ಟ್ ಘೋಷಿಸಿದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳದೇ ಬೇಜವಾಬ್ದಾರಿ ತೋರುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಹಲವು ದಶಕಗಳ ನಂತರ ಉಕ್ಕಿ ಹರಿದ ಪಾಪಾಗ್ನಿ ನದಿ:
ಇನ್ನು ಜಿಲ್ಲೆಯಲ್ಲಿ ನದಿಗಳ ಪುರಾವೆಗಳೇ ಇಲ್ಲದಂತಾಗಿತ್ತು. ಆದರೆ, ನಿರಂತರ ಮಳೆ ಹಿನ್ನೆಲೆ, ಹಲವು ದಶಕಗಳ ನಂತರ ಪಾಪಾಗ್ನಿ ನದಿ ಹರಿಯುತ್ತಿದೆ. ಸ್ಥಳೀಯರಿಗೆ ಸಂತಸವಾಗಿದ್ದು, ನದಿಯನ್ನು ನೋಡಲು ತಂಡೋಪತಂಡಗಳಾಗಿ ಆಗಮಿಸುತ್ತಿದ್ದಾರೆ.