ಚಿಕ್ಕಬಳ್ಳಾಪುರ:ತಾಯಿಯೊಂದಿಗೆ ದೇವಸ್ಥಾನಕ್ಕೆ ಹೋಗಿ ಮನೆಗೆ ಹಿಂತಿರುಗುವಾಗ ಬೈಕ್ ಚಾಲಕನೋರ್ವ ಅಜಾಗರೂಕತೆಯಿಂದ ಬಂದು ಬಾಲಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮಗು ಸಾವನ್ನಪ್ಪಿದೆ. ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸಮೀಪ ಕಳೆದ ಶನಿವಾರ ನಡೆದಿದೆ.
ಮುದ್ದೇನಹಳ್ಳಿ ಗ್ರಾಮದ ಕಾಂತರಾಜು ಹಾಗೂ ಶಾಮಲಾ ದಂಪತಿಯ 7 ವರ್ಷದ ಮಗು ಜಾನುಶ್ರೀ ಮೃತಪಟ್ಟಿದ್ದಾಳೆ. ಜಾನುಶ್ರೀ ಮುದ್ದೇನಹಳ್ಳಿ ಗ್ರಾಮದ ಪಂಚವಟಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಸ್ಥಳೀಯರ ಸಹಾಯದಿಂದ ಬಾಲಕಿಯನ್ನು ಸ್ಥಳೀಯ ಮುದ್ದೇನಹಳ್ಳಿ ಆಸ್ಪತ್ರೆಗೆ ರವಾನಿಸಲಾಗಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ನಂದಿ ಗಿರಿಧಾಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪೋಷಕರು ಬೈಕ್ ಸವಾರನ ವಿರುದ್ಧ ದೂರು ದಾಖಲಿಸಿದ್ದಾರೆ.
ಇತರ ಪ್ರಕರಣ: ಕೊಪ್ಪಳದಲ್ಲಿ ಬೈಕ್ ಸ್ಕಿಡ್ ಆಗಿ ಫ್ರಾನ್ಸ್ ಪ್ರವಾಸಿಗ ಸಾವು:ಫ್ರಾನ್ಸ್ ಪ್ರವಾಸಿಗ ಮೋನ್ಸಲರ್ ಎಂಬಾತ ತನ್ನ ಸ್ನೇಹಿತರೊಂದಿಗೆ ಹಂಪಿ ನೋಡಲು ಭಾರತಕ್ಕೆ ಬಂದಿದ್ದರು. ಆದರೆ ಇಂದು ಹಂಪಿಯಿಂದ ಗೋವಾಕ್ಕೆ ತೆರಳುವ ವೇಳೆ ಕೊಪ್ಪಳದಲ್ಲಿ ಬೈಕ್ ಸ್ಕಿಡ್ ಆಗಿ ಸಾವನ್ನಪ್ಪಿದ್ದಾರೆ.
ನೇತ್ರಾವತಿ ನದಿಗೆ ಹಾರಿ ಚಿಕ್ಕಮಗಳೂರು ವ್ಯಕ್ತಿ ಆತ್ಮಹತ್ಯೆ:ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬರು ತರಕಾರಿ ವ್ಯಾಪಾರದ ಹಣ ವಸೂಲಿ ಮಾಡಿಕೊಂಡು ಬರುತ್ತೇನೆಂದು ಮನೆಯಲ್ಲಿ ಹೇಳಿ, ಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು:ಸರಗೂರು ತಾಲೂಕಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ತರಬೇತಿಗಾಗಿ ಐವರು ವಿದ್ಯಾರ್ಥಿಗಳು ಆಗಮಿಸಿದ್ದರು. ಈ ವಿದ್ಯಾರ್ಥಿಗಳೆಲ್ಲ ಭಾನುವಾರ ಬೀಚನಹಳ್ಳಿ ಎಡದಂಡೆ ನಾಲೆಗೆ ನೀರಿನಲ್ಲಿ ಈಜಲು ತೆರಳಿದ್ದರು. ಈಜಲು ಬಾರದ ಕಿಶನ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಉಜಿರೆ: ಮಗನಿಗೆ ಚೂರಿ ಇರಿದು ಕೊಂದ ತಂದೆ