ಚಾಮರಾಜನಗರ :ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿ ಆದವರು ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೌಢ್ಯ ತೊಡೆದು ಹಾಕಿದ್ದ ಸಿದ್ದರಾಮಯ್ಯ ಈಗ 2 ಬಾರಿ ಸಿಎಂ ಗಾದಿಗೆ ಏರುತ್ತಿದ್ದಾರೆ.
ಹೌದು, ಮುಖ್ಯಮಂತ್ರಿ ಆಗಿದ್ದ ವೇಳೆ 17 ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಆಗಮಿಸಿ ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದ ಸಿದ್ದರಾಮಯ್ಯ. ಈಗ ಮತ್ತೆ ಸಿಎಂ ಆಗುತ್ತಿದ್ದು, ಗಡಿಜಿಲ್ಲೆ ಅಭಿವೃದ್ಧಿಗೆ ಶುಕ್ರದೆಸೆ ಆರಂಭ ಎಂಬುದು ಜನರ ಮಾತಾಗಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ವರುಣಾ ವಿಧಾನಸಭೆ ಬರಲಿದ್ದು, ಜೊತೆಗೆ ಚಾಮರಾಜನಗರ ಅವಿಭಜಿತ ಮೈಸೂರು ಜಿಲ್ಲೆಯಲ್ಲಿದ್ದರಿಂದ ಗಡಿಜಿಲ್ಲೆ ಕಂಡರೆ ವಿಶೇಷ ಪ್ರೀತಿ ಇಟ್ಟುಕೊಂಡಿರುವ ಸಿದ್ದರಾಮಯ್ಯ ಜಿಲ್ಲಾ ಉದ್ಘಾಟನೆ ವೇಳೆ ಅಂದಿನ ಸಿಎಂ ಜೆ ಹೆಚ್ ಪಟೇಲ್ ಮಲೆಮಹದೇಶ್ವರ ಬೆಟ್ಟದಲ್ಲಿ ಜಿಲ್ಲೆ ಉದ್ಘಾಟಿಸಿದರೆ, ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಬಂದು ಜಿಲ್ಲಾಕೇಂದ್ರ ಉದ್ಘಾಟಿಸಿದ್ದರು.
ಚಾಮರಾಜನಗರ ಅಭಿವೃದ್ಧಿ ವೇಗ ಪಡೆಯಲಿದೆ: ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೌಢ್ಯಕ್ಕೆ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ವೇಳೆ 17ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟು 5 ವರ್ಷ ಆಡಳಿತ ನಡೆಸಿ ಗಡಿಜಿಲ್ಲೆಗೆ ಅಂಟಿದ್ಧ ಮೌಢ್ಯಕ್ಕೆ ಎಳ್ಳುನೀರು ಬಿಟ್ಟಿದ್ದರು. ಈಗ ಮತ್ತೆ ಸಿಎಂ ಆಗುತ್ತಿದ್ದು, ಚಾಮರಾಜನಗರ ಅಭಿವೃದ್ಧಿ ವೇಗ ಪಡೆಯಲಿದೆ ಎಂಬುದು ಜನರ ಪಕ್ಷಾತೀತ ಅಭಿಪ್ರಾಯವಾಗಿದೆ.
ಚಾಮರಾಜನಗರ ಪರ ರೋಡ್ ಶೋ ಮಾಡಿದ್ದ ಸಿದ್ದರಾಮಯ್ಯ:ಗಡಿ ಚಾಮರಾಜನಗರ ಜಿಲ್ಲೆಯ ಜನತೆಯ ವಲಸೆ ತಪ್ಪಿಸುವ ಸಲುವಾಗಿ ಬಹು ನಿರೀಕ್ಷೆಯಿಂದ ಆರಂಭಿಸಲಾದ ಚಾಮರಾಜನಗರ ತಾಲೂಕಿನ ಬದನಗುಪ್ಪೆ - ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬರದಿದ್ದಾಗ ಕೈಗಾರಿಕೆಗಳನ್ನು ಸೆಳೆಯಲು ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ತಮಿಳುನಾಡಿನ ಕೊಯಮತ್ತೂರಿನಲ್ಲಿ ರೋಡ್ ಶೋ ನಡೆಸಿ ಗಮನ ಸೆಳೆದಿದ್ದರು.
ಹೊಸ ಕೈಗಾರಿಕೆಗಳು ಸ್ಥಾಪನೆಯಾಗುವ ನಿರೀಕ್ಷೆ:ಆಗ ಆರಂಭಿಕ ಯಶ ಕಂಡಿದ್ದ ಸಿದ್ದರಾಮಯ್ಯ 300 ಕೈಗಾರಿಕೋದ್ಯಮಿಗಳು ಸುಮಾರು 12 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಆಸಕ್ತಿ ತೋರಿದ್ದರು. ಆದರೆ, ನಂತರ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಹಿಂದೇಟು ಹಾಕಿದ್ದರು. ಈಗ ಮತ್ತೆ ಸಿದ್ದರಾಮಯ್ಯ ಸಿಎಂ ಆಗುತ್ತಿರುವುದರಿಂದ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುವ ನಿರೀಕ್ಷೆ ಗರಿಗೆದರಿದೆ.
ಚಾಮರಾಜನಗರ ಶಾಸಕಗೆ ಸಚಿವ ಪಟ್ಟ: ಸಿದ್ದರಾಮಯ್ಯ ಶಿಷ್ಯ, ಆಪ್ತ ಬಳಗದ ಶಾಸಕ ಸಿ ಪುಟ್ಟರಂಗಶೆಟ್ಟಿ ಸತತ ನಾಲ್ಕನೇ ಬಾರಿ ಗೆದ್ದಿದ್ದಾರೆ. ಅದೂ ಕೂಡ, ಬಿಜೆಪಿ ಪ್ರಭಾವಿ ನಾಯಕ ಸೋಮಣ್ಣ ವಿರುದ್ಧ ಜಯ ಸಾಧಿಸಿದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.
ಚಾಮರಾಜನಗರದಲ್ಲಿ ಗೆದ್ದಿರುವ ಮೂವರು ಕೈ ಶಾಸಕರು ಕೂಡ ಸಿದ್ದರಾಮಯ್ಯ ಜೊತೆ ಆತ್ಮೀಯ ಸಂಬಂಧ ಹೊಂದಿದ್ದು, ಅನುದಾನ ತರುವಲ್ಲಿ ಯಾವುದೇ ಸಮಸ್ಯೆ ಎದುರಿಸಲಾರರು ಎಂಬುದಂತೂ ಸತ್ಯ. ಮೊದಲ ಬಾರಿ ಸಿಎಂ ಆದಾಗ ಚಾಮರಾಜನಗರದ ಮೌಢ್ಯ ತೊಡೆದು ಹಾಕಿದ್ದ ಸಿದ್ದರಾಮಯ್ಯ ಈಗ ಎರಡನೇ ಬಾರಿ ಸಿಎಂ ಆಗುತ್ತಿದ್ದು, ಗಡಿಜಿಲ್ಲೆ ನಿರೀಕ್ಷೆಗಳು ಗರಿಗೆದರಿವೆ.
ಇದನ್ನೂ ಓದಿ :ಮುನಿಸು ಮುಗಿಸಿ 'ಕೈ' ಜೋಡಿಸಿದ ಸಿದ್ದು, ಡಿಕೆಶಿ: ಜನಪರ ಆಡಳಿತದ ಭರವಸೆ