ಕರ್ನಾಟಕ

karnataka

ETV Bharat / state

ಸ್ವಚ್ಛತಾ ವಾರಿಯರ್ಸ್‌ಗೆ ಯಂತ್ರ ಬಲ.. ನಗರ, ಪಟ್ಟಣ ನೈರ್ಮಲ್ಯಕ್ಕಾಗಿ ಬಂದ ಹಿಟಾಚಿಗಳು.. - Chamarajanagar

ಯಂತ್ರೋಪಕರಣ ನಿರ್ವಹಣೆಯನ್ನು ಆಯಾ ಸ್ಥಳೀಯ ಸಂಸ್ಥೆಗಳೇ ಮಾಡಲಿವೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇದರೊಟ್ಟಿಗೆ ಜಿಲ್ಲೆಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿ ಹಾಗೂ ಒಣ ಕಸಗಳಲ್ಲಿ ಮಿಶ್ರಿತವಾದ ಘನ ವಸ್ತುಗಳ ವಿಂಗಡಣೆಗಾಗಿ ಸ್ಕ್ರೀನಿಂಗ್‌ ಯಂತ್ರ ಬರಲಿದೆ..

Hitachi
ಹಿಟಾಚಿ

By

Published : Mar 29, 2021, 5:17 PM IST

ಚಾಮರಾಜನಗರ :ಸ್ವಚ್ಛತಾ ಸಿಪಾಯಿಗಳಾದ ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಚರಂಡಿ ಸ್ವಚ್ಛತೆ ಹಾಗೂ ಇನ್ನಿತರ ಅಪಾಯಕಾರಿ ಕೆಲಸಗಳಲ್ಲಿ ತೊಡಗುವುದನ್ನು ತಡೆಗಟ್ಟಲು ಹಾಗೂ ನಗರ ನೈರ್ಮಲ್ಯ ಕೆಲಸಗಳಿಗಾಗಿ ಜಿಲ್ಲಾಡಳಿತ ಹಿಟಾಚಿಗಳನ್ನು ಖರೀದಿ ಮಾಡಿದೆ.

ಸ್ವಚ್ಛ ಭಾರತ ಮಿಷನ್‌ ಅಭಿಯಾನದಡಿ 1.10 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಹಿಟಾಚಿಗಳನ್ನು ಖರೀದಿಸಲಾಗಿದೆ. ಸದ್ಯದಲ್ಲೇ ಈ ಹಿಟಾಚಿಗಳು ಜಿಲ್ಲೆಯ ಹನೂರು, ಯಳಂದೂರು ಪಟ್ಟಣ ಪಂಚಾಯತ್ ಹಾಗೂ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆಗೆ ಹಸ್ತಾಂತರವಾಗಲಿವೆ.

ತಲಾ ಒಂದಕ್ಕೆ 27.5 ಲಕ್ಷ ರೂ. ದರದಲ್ಲಿ ನಾಲ್ಕು ಹಿಟಾಚಿಗಳನ್ನು ಹುಬ್ಬಳ್ಳಿಯ ಟಾಟಾ ಏಜೆನ್ಸಿಯು ಪೂರೈಸಿದೆ. ಜಿಲ್ಲಾಡಳಿತದ ಆವರಣಕ್ಕೆ ತಂದು ನಿಲ್ಲಿಸಲಾಗಿದೆ. ಗುಂಡ್ಲುಪೇಟೆ ಪುರಸಭೆಯಲ್ಲಿ ಈಗಾಗಲೇ ಹಿಟಾಚಿ ಯಂತ್ರ ಇರುವುದರಿಂದ ಅದನ್ನು ಹೊರತುಪಡಿಸಿ ಎರಡು ನಗರಸಭೆಗಳು ಹಾಗೂ ಎರಡು ಪಟ್ಟಣ ಪಂಚಾಯತ್‌ಗಳಿಗೆ ಯಂತ್ರಗಳನ್ನು ನೀಡಲು ನಿರ್ಧರಿಸಲಾಗಿದೆ.

ಹಿಟಾಚಿಗಳು

ಯಂತ್ರೋಪಕರಣ ಸುಸ್ಥಿತಿಯಲ್ಲಿರುವುದನ್ನು ಪರಿಶೀಲಿಸುವ ಸಲುವಾಗಿ ಆರ್‌ಟಿಒ, ಪರಿಸರ ಎಂಜಿನಿಯರ್‌ವೊಬ್ಬರು, ಇಇ ಒಳಗೊಂಡ ಒಂದು ತಂಡವನ್ನು ಮುಂಬೈಗೆ ಜಿಲ್ಲಾಡಳಿತದ ವತಿಯಿಂದ ಕಳುಹಿಸಲಾಗಿತ್ತು. ಹಿಟಾಚಿ ಬಂದ ನಂತರವೂ ಎಂಜಿನಿಯರಿಂಗ್‌ ಕಾಲೇಜು ಪರಿಣಿತ ತಜ್ಞರಿಂದ ಯಂತ್ರೋಪಕರಣಗಳ ಕಾರ್ಯಕ್ಷಮತೆ ದೃಢೀಕರಿಸುವ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಏಪ್ರಿಲ್ 3ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ಅವರು ವಿತರಣೆ ಮಾಡಲಿದ್ದಾರೆ.

ಒಳಚರಂಡಿ ದುರಸ್ತಿಯಂತಹ ಸಂದರ್ಭಗಳಲ್ಲಿ ಪೌರಕಾರ್ಮಿಕರನ್ನು ಇಳಿಸುವ ಅನಿವಾರ್ಯತೆ ಎದುರಾಗಿತ್ತು. ಮಳೆ ಬಂದ ಸಂದರ್ಭಗಳಲ್ಲಿ ಒಳಚರಂಡಿ ಸ್ವಚ್ಛತೆ, ಚರಂಡಿ ದುರಸ್ಥಿ, ತೆರವು ಕಾರ್ಯಾಚರಣೆಯಂತಹ ತುರ್ತು ಸಂದರ್ಭಗಳಲ್ಲಿ ಖಾಸಗಿ ಹಿಟಾಚಿಗಳನ್ನು ಅವಲಂಬಿಸಿದ್ದ ಸ್ಥಳೀಯ ಸಂಸ್ಥೆಗಳು, ಇನ್ನು ಮುಂದೆ ಸ್ವಂತದ ಹಿಟಾಚಿಗಳನ್ನು ಹೊಂದಲಿವೆ. ಅಪಾಯಕಾರಿ ಕೆಲಸಗಳಲ್ಲಿ ಪೌರಕಾರ್ಮಿಕರ ಬಳಕೆ ತಪ್ಪಲಿದೆ.

ಪಟ್ಟಣ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರನ್ನು ಒಳಚರಂಡಿ ಹಾಗೂ ಇನ್ನಿತರ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಬಾರದು ಎಂಬ ಸುಪ್ರೀಂಕೋರ್ಟ್‌ ಆದೇಶ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಹಂತ ಹಂತವಾಗಿ ಯಂತ್ರೋಪಕರಣಗಳನ್ನು ತರಿಸಲಾಗುತ್ತಿದೆ.

ಯಂತ್ರೋಪಕರಣ ನಿರ್ವಹಣೆಯನ್ನು ಆಯಾ ಸ್ಥಳೀಯ ಸಂಸ್ಥೆಗಳೇ ಮಾಡಲಿವೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇದರೊಟ್ಟಿಗೆ ಜಿಲ್ಲೆಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿ ಹಾಗೂ ಒಣ ಕಸಗಳಲ್ಲಿ ಮಿಶ್ರಿತವಾದ ಘನ ವಸ್ತುಗಳ ವಿಂಗಡಣೆಗಾಗಿ ಸ್ಕ್ರೀನಿಂಗ್‌ ಯಂತ್ರ ಬರಲಿದೆ.

ಹಿಟಾಚಿಗಳ ವಿತರಣೆ ನಂತರ ಜಿಲ್ಲಾ ನಗರಾಭಿವೃದ್ಧಿ ಕೋಶವು ವಿನಿಯೋಗಿತ ಪ್ರಮಾಣ ಪತ್ರ(ಯು.ಸಿ)ವನ್ನು ಪೌರಾಡಳಿತ ನಿರ್ದೇಶನಾಲಯದ ಮೂಲಕ ಸ್ವಚ್ಛ ಭಾರತ ಮಿಷನ್‌ಗೆ ಕಳುಹಿಸಿದ ನಂತರ ಸ್ಕ್ರೀನಿಂಗ್‌ ಯಂತ್ರಗಳು ಜಿಲ್ಲೆಗೆ ಬರಲಿವೆ ಎಂದು ಅವರು ಮಾಹಿತಿ ನೀಡಿದರು.

ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಸ್ಕ್ರೀನಿಂಗ್‌ ಯಂತ್ರವು ಕಾರ್ಯ ನಿರ್ವಹಿಸಲಿದೆ. ಹಸಿ ಹಾಗೂ ಒಣ ಕಸಗಳಲ್ಲಿ ಮಿಶ್ರಿತವಾಗಿರುವ ಕಲ್ಲು, ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಬೇರ್ಪಡಿಸಲಿದೆ.‌

ABOUT THE AUTHOR

...view details