ಮೇವು ಸಾಗಾಟ ನಿಷೇಧ ಖಂಡಿಸಿ ಕರ್ನಾಟಕ-ಕೇರಳ ಗಡಿಯಲ್ಲಿ ಎಲ್ಡಿಎಫ್ ಪ್ರತಿಭಟನೆ ಚಾಮರಾಜನಗರ: ಬರ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಕಳೆದ ನವೆಂಬರ್ 22ರಿಂದ ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯಕ್ಕೆ ಮೇವು ಮಾರಾಟ ಮತ್ತು ಸಾಗಾಟ ನಿಷೇಧಿಸಿ ಆದೇಶ ಹೊರಡಿಸಿದ್ದು, ಈ ಕ್ರಮವನ್ನು ಖಂಡಿಸಿ ಕೇರಳಿಗರು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಹಾಗೂ ಕೇರಳದ ಗಡಿಯ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಗಡಿಭಾಗದಲ್ಲಿ ಎಲ್ಡಿಎಫ್ ನೇತಾರ ಕೇರಳದ ಸಚಿವ ಜಯರಾಜನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಎಲ್ಡಿಎಫ್ ಪ್ರತಿಭಟನೆ:ಈ ವೇಳೆ ಸುಲ್ತಾನ್ ಬತ್ತೇರಿಯ ಪೂಂಕುಳಿಯಿಂದ ಗುಂಡ್ಲುಪೇಟೆ ಮೂಲೆಹೊಳೆ ಚೆಕ್ ಪೋಸ್ಟ್‌ವರೆಗೆ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಸದಸ್ಯರು, ಹೈನುಗಾರರು ಮತ್ತು ಪ್ರತಿಭಟನಾಕಾರರು ಪಾದಯಾತ್ರೆ ನಡೆಸಿದರು. ಮೇವು ಸಾಗಾಟ ನಿಷೇಧವನ್ನು ಈ ಕೂಡಲೇ ತೆರವುಗೊಳಿಸಿ ಎರಡು ರಾಜ್ಯಗಳ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಎಲ್ಡಿಎಫ್ ನೇತಾರ ಸಚಿವ ಜಯರಾಜನ್ ಮಾತನಾಡಿ, ಕರ್ನಾಟಕದ ಮೇವನ್ನು ಕೇರಳ ರೈತರು ಅವಲಂಬಿಸಿದ್ದಾರೆ. ಕೇರಳದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಜಿಲ್ಲೆಯಲ್ಲಿ ವಯನಾಡು ಎರಡನೇ ಸ್ಥಾನದಲ್ಲಿದೆ. ಮೇವು ಸರಬರಾಜು ಆಗದಿರುವುದರಿಂದ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತಿದೆ. ವಯನಾಡು ಸಂಸದ ರಾಹುಲ್ ಗಾಂಧಿ ಈ ಸಂಬಂಧ ಮೌನವಹಿಸಿದ್ದಾರೆ. ಜಿಲ್ಲಾಧಿಕಾರಿಯವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯನಿರ್ವಹಿಸಲು ಸಾಧ್ಯವಿದೆ. ಆದರೆ ಇದು ಎರಡು ರಾಜ್ಯಗಳ ನಡುವಿನ ಕೃಷಿಗೆ ಸಂಬಂಧಿಸಿದ ವಿಷಯವಾಗಿದೆ. ಆದ್ದರಿಂದ ರಾಹುಲ್ ಗಾಂಧಿ ಅವರು ಈ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಜಯರಾಜನ್ ಒತ್ತಾಯಿಸಿದ್ದಾರೆ.
ಬರ- ಗಡಿಜಿಲ್ಲೆ ಚಾಮರಾಜನಗರ ತತ್ತರ:ರಾಜ್ಯಾದ್ಯಂತ ಬರ ತಾಂಡವವಾಡುತ್ತಿದ್ದು, ಈ ಸಂಬಂಧ ರಾಜ್ಯ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಬರ ಹಿನ್ನೆಲೆಯಲ್ಲಿ ಚಾಮರಾಜನಗರದ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ನಮ್ಮಲ್ಲಿ ಈಗ ಕೇವಲ 20 ವಾರಗಳಿಗೆ ಬೇಕಾಗುವಷ್ಟು ಮಾತ್ರ ಮೇವು ಸಂಗ್ರಹವಿದ್ದು, ರೈತರು ಸಾಧ್ಯವಾದಷ್ಟು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಈಗಾಗಲೇ 3 ಸಾವಿರ ಮಂದಿ ರೈತರಿಗೆ ಮೇವಿನ ಬೀಜದ ಕಿಟ್ಗಳನ್ನು ವಿತರಣೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಹನುಮೇಗೌಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪ್ಲಾಸ್ಟಿಕ್ನಿಂದ ಟೈಲ್ಸ್ ತಯಾರಿಕೆ : ಪಾಲಿಕೆಯ ಕಸ ಸಂಗ್ರಹಣ ಘಟಕದಲ್ಲಿ ಹೊಸ ಪ್ರಯೋಗ