ಚಾಮರಾಜನಗರ:ಕೆಆರ್ಎಸ್ ಮತ್ತು ಕಬಿನಿ ಹೊರಹರಿವಿನಿಂದ ಕಾವೇರಿ ಭೋರ್ಗರೆದು ಹರಿಯುತ್ತಿದ್ದು, ತಮಿಳುನಾಡಿನ ಮೆಟ್ಟೂರು ಜಲಾಶಯವು ಸತತ ನಾಲ್ಕನೇ ವರ್ಷ ಭರ್ತಿಯಾಗಿದೆ. 120 ಅಡಿ ಗರಿಷ್ಠ ಮಟ್ಟ ಹೊಂದಿರುವ ಮೆಟ್ಟೂರು ಜಲಾಶಯದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ 115 ಅಡಿ ನೀರಿತ್ತು.
ಎರಡು ದಿನಗಳ ಅವಧಿಯಲ್ಲೇ 10 ಅಡಿಗೂ ಹೆಚ್ಚು ನೀರು ಸಂಗ್ರಹಗೊಂಡಿದೆ. ಹೊಗೆನಕಲ್ ಮೂಲಕ 1.20 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಸೇರುತ್ತಿದೆ. ಅಣೆಕಟ್ಟೆಯ ಒಳಹರಿವು 1.20 ಲಕ್ಷ ಕ್ಯೂಸೆಕ್ ಇದ್ದು, ಹೊರಹರಿವು 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಮುಂದಿನ ಕೆಲ ಗಂಟೆಗಳಲ್ಲಿ 1 ಲಕ್ಷ ಕ್ಯೂಸೆಕ್ ಹರಿಬಿಡುವ ಸಾಧ್ಯತೆಯಿದೆ. ಕಳೆದ 3-4 ವರ್ಷಗಳಿಂದಲೂ ಮೆಟ್ಟೂರು ಜಲಾಶಯ ಭರ್ತಿಯಾಗುತ್ತಿದೆ.