ಚಾಮರಾಜನಗರ: ಭಾರತ ಜೋಡೋ ಯಾತ್ರೆ ಹಿನ್ನೆಲೆ ಗುಂಡ್ಲುಪೇಟೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಾಯಕರ ಫ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು. ಆದರೆ ಇವನ್ನು ಬಿಜೆಪಿ ಕಾರ್ಯಕರ್ತರು ಹರಿದು ಹಾಕಿದ್ದಾರೆ ಎನ್ನಲಾಗ್ತಿದೆ. ಈ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಗುಂಡ್ಲುಪೇಟೆಯಲ್ಲಿ ಅಂತಿಮ ಹಂತದ ಸಿದ್ಧತೆ ಪರಿಶೀಲನೆ ನಡೆಸಿ, ಬಳಿಕ ಅವರು ಮಾತನಾಡಿದರು. ಫ್ಲೆಕ್ಸ್ ಹರಿದು ಹಾಕಿರುವುದಕ್ಕೆಲ್ಲಾ ನಾವು ಹೆದರುವುದಿಲ್ಲ. ಅವರು ಏನು ಬೇಕಾದರೂ ಪೋಸ್ಟರ್ ಅಭಿಯಾನ ಮಾಡಿಕೊಳ್ಳಲಿ. ಅವರು ಇಲ್ಲೇ ರಾಜಕಾರಣ ಮಾಡಬೇಕು, ನಾವು ಇಲ್ಲೇ ರಾಜಕಾರಣ ಮಾಡಬೇಕು. ನಮ್ಮ ಕಾರ್ಯಕರ್ತರಿಗೂ ಶಕ್ತಿ ಇದೆ, ಪೊಲೀಸರು ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ರೆ ನಾನು ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ, ಅವರ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದ ಬಗ್ಗೆ ಪ್ರಶ್ನಿಸಿದ್ದಕ್ಕೆ, ಸದ್ಯಕ್ಕೆ ನಾವು ಭಾರತವನ್ನು ಒಗ್ಗೂಡಿಸಬೇಕಿದೆ. ಜನರ ಬದುಕನ್ನು ಹಸನು ಮಾಡಬೇಕಿದೆ. ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸಬೇಕಿದೆ ಎನ್ನುವ ಮೂಲಕ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.